ನವದೆಹಲಿ, ಮೇ.22 (DaijiworldNews/AA): ಆಮ್ ಆದ್ಮಿ ಪಕ್ಷವನ್ನು ಗುರಿಯಾಗಿಸಲು ಬಿಜೆಪಿ ಹೊಸ ಸಂಚು ರೂಪಿಸಿದೆ. ಹರಿಯಾಣ ಸರ್ಕಾರದ ಮುಖಾಂತರ ಬಿಜೆಪಿ ಬೇಕಂತಲೇ ದೆಹಲಿಗೆ ನೀರು ಸರಬರಾಜು ನಿಲ್ಲಿಸಿದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದಾಗಿನಿಂದಲೂ ಎಎಪಿಯನ್ನು ಗುರಿಯಾಗಿಸಲು ಬಿಜೆಪಿ ಷಡ್ಯಂತ್ರಗಳನ್ನು ರೂಪಿಸುತ್ತಿದೆ. ಚುನಾವಣೆ ಘೋಷಣೆಯಾದ 5 ದಿನಗಳಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗದಂತೆ ಮಾಡಲು ಅರೆಸ್ಟ್ ಮಾಡಲಾಯಿತು. ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರಾದ ಹಿನ್ನೆಲೆ ಜೈಲಿನಿಂದ ಹೊರಬಂದಿದ್ದಾರೆ. ಬಳಿಕ ಬಿಜೆಪಿಯವರು ಎಎಪಿಯ ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್ ಅವರನ್ನು ಬಳಸಿಕೊಂಡು ಕೇಜ್ರಿವಾಲ್ ಮೇಲೆ ಆರೋಪಿಸಲು ಪ್ರಯತ್ನಿಸಿದರು. ಆದರೆ ಆ ಯೋಜನೆಯು ಕಾರ್ಯರೂಪಕ್ಕೆ ಬರಲಿಲ್ಲ ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟು ಸೃಷ್ಟಿ ಮಾಡಲು ಹಾಗೂ ಹರಿಯಾಣ ಸರ್ಕಾರದ ಮುಖಾಂತರ ದೆಹಲಿಗೆ ನೀರು ಪೂರೈಕೆ ಸ್ಥಗಿತಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಈ ಮೊದಲು ಸಮಸ್ಯೆ ಇರದ ಸ್ಥಳಗಳಿಂದಲೂ ನೀರಿನ ಕೊರತೆಯ ಕುರಿತು ದೂರುಗಳು ಬಂದಿವೆ. ಇದರಿಂದಾಗಿ ಈ ವಿಷಯ ಬೆಳಕಿಗೆ ಬಂದಿದೆ. ಇಂದು ಹರಿಯಾಣ ಸರ್ಕಾರಕ್ಕೆ ನಮ್ಮ ಸರ್ಕಾರ ಪತ್ರ ಬರೆಯಲಿದೆ. ಅವರು ಯಾವುದೇ ಕ್ರಮ ಕೈಗೊಳ್ಳದಿದ್ದರೆ ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದರು.