ಬೆಂಗಳೂರು, ಮೇ.22 (DaijiworldNews/AK): ಹತ್ಯೆ ಮತ್ತು ಆತ್ಮಹತ್ಯೆ ಕಾಂಗ್ರೆಸ್ ಸರಕಾರದ ಸಾಧನೆಯೇ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರವು ಒಂದು ವರ್ಷವನ್ನು ಪೂರ್ಣಗೊಳಿಸಿ ಸಂಭ್ರಮಾಚರಣೆಯನ್ನೂ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಹತ್ತಾರು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ ಎಂದು ನುಡಿದರು.
ಈ ಸರಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿ ಜೈನ ಮುನಿಗಳ ಹತ್ಯೆಯಿಂದ ಆರಂಭಗೊಂಡು ತಿಂಗಳಿಗೆ ಶತಕಗಳ ಗಡಿಯನ್ನು ಹತ್ಯೆ- ಆತ್ಮಹತ್ಯೆಯಲ್ಲಿ ದಾಟಿದೆ ಎಂದು ಆಕ್ಷೇಪಿಸಿದರು.
ಸಾವಿರಕ್ಕೂ ಹೆಚ್ಚು ಹತ್ಯೆ, ಸಾವಿರಕ್ಕೂ ಹೆಚ್ಚು ಆತ್ಮಹತ್ಯೆ ಸರಕಾರದ ಸಾಧನೆಯೇ ಎಂದು ಅವರು ಕೇಳಿದರು. ನ್ಯಾಷನಲ್ ಕ್ರೈಂ ಬ್ಯೂರೋ ರೆಕಾಡ್ರ್ಸ್ ಪ್ರಕಾರ ಕಳೆದ 4 ತಿಂಗಳಲ್ಲಿ ಕರ್ನಾಟಕದಲ್ಲಿ 430ಕ್ಕೂ ಹೆಚ್ಚು ಕೊಲೆಗಳು ನಡೆದಿವೆ ಎಂದು ವರದಿ ಹೇಳುತ್ತದೆ. ಕಳೆದ 10 ತಿಂಗಳಲ್ಲಿ 700ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಆಗಿದೆ ಎಂದು ಸರಕಾರದ ವರದಿಯೇ ತಿಳಿಸಿದೆ.
ರೈತರ ಆತ್ಮಹತ್ಯೆಯೇ 700 ಗಡಿ ದಾಟಿರಬೇಕಾದರೆ, 4 ತಿಂಗಳಲ್ಲಿ 400ಕ್ಕೂ ಹೆಚ್ಚು ಕೊಲೆಗಳು ನಡೆದಿರಬೇಕಾದರೆ ಈ ಸರಕಾರ ಹತ್ಯೆ ಮತ್ತು ಆತ್ಮಹತ್ಯೆಯಲ್ಲಿ ಪ್ರತಿ ತಿಂಗಳು ಶತಕಗಳ ಗಡಿಯನ್ನು ದಾಟಿದೆ. ಇದು ನಿಮ್ಮ ಸರಕಾರದ ಸಾಧನೆಯೇ ಎಂದು ಪ್ರಶ್ನಿಸಿದರು.
ಬಿಬಿಎಂಪಿ ಗುತ್ತಿಗೆದಾರರು ತಮ್ಮ ಸರಕಾರದ ಮೇಲೆ ಶೇ 40 ಕಮಿಷನ್ ಆರೋಪ ಮಾಡಿದ್ದಾರೆ. ಈ ಆರೋಪವನ್ನೂ ನಾಗಮೋಹನ್ದಾಸ್ ಅವರ ಸಮಿತಿ ತನಿಖೆ ಮಾಡಲಿದೆಯೇ? ಬಿಟ್ ಕಾಯಿನ್ ಹಗರಣ ಎಸ್ಐಟಿಗೆ ವಹಿಸಿ 10 ತಿಂಗಳಾಗಿದೆ. ತನಿಖೆ ಯಾವಾಗ ಮುಕ್ತಾಯ ಆಗಲಿದೆ? ದೋಷಾರೋಪ ಪಟ್ಟಿ ಸಲ್ಲಿಸುವುದು ಯಾವಾಗ ಎಂದು ಕೇಳಿದರು.