ರಾಜ್ಕೋಟ್, ಮೇ 25 (DaijiworldNews/AA): ಗೇಮಿಂಗ್ ಝೋನ್ ನಲ್ಲಿ ಬೆಂಕಿ ಅವಘಡ ಸಂಭವಿಸಿ ಮಕ್ಕಳು ಸೇರಿ 20 ಮಂದಿ ಸಾವನ್ನಪ್ಪಿದ ಘಟನೆ ಗುಜರಾತ್ನ ರಾಜ್ಕೋಟ್ನಲ್ಲಿ ಇಂದು ಸಂಜೆ ನಡೆದಿದೆ.
ಈ ಬೆಂಕಿ ಅವಘಡಕ್ಕೆ ಇನ್ನೂ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ತಾತ್ಕಾಲಿಕ ಕಟ್ಟಡ ಕುಸಿದಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಹಲವು ಅಗ್ನಿಶಾಮಕ ಟೆಂಡರ್ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸುತ್ತಿದೆ.
ಹಲವರು ಒಳಗೆ ಸಿಲುಕಿರುವ ಶಂಕೆ ಇದೆ. ಬೆಂಕಿಯನ್ನು ನಂದಿಸಿದ ನಂತರ ಸ್ಪಷ್ಟವಾದ ಮಾಹಿತಿ ದೊರೆಯಲಿದೆ. ಸುಮಾರು 20 ಮೃತದೇಹಗಳು ಪತ್ತೆಯಾಗಿವೆ. ಹೆಚ್ಚಿನ ತನಿಖೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆ ನಡೆಸಲಾಗುವುದು ಎಂದು ರಾಜ್ ಕೋಟ್ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಅವರು, ರಾಜ್ಕೋಟ್ನ ಗೇಮಿಂಗ್ ಝೋನ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.