ದೆಹಲಿ, ಮೇ 26 (DaijiworldNews/AA): ಬಂಗಾಳದ ಕರಾವಳಿಗೆ ಇಂದು ರೆಮಲ್ ಚಂಡಮಾರುತ ಅಪ್ಪಳಿಸಲಿದೆ. ಜೊತೆಗೆ ಮಧ್ಯರಾತ್ರಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯ ನಡುವೆ ಭೂಕುಸಿತವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಹೀಗಾಗಿ ಅದು ಚಂಡಮಾರುತವಾಗಿ ಪರಿವರ್ತನೆಯಾಗಿದೆ. ರೆಮಲ್ ಈ ಋತುವಿನಲ್ಲಿ ಬಂಗಾಳ ಕೊಲ್ಲಿಯಲ್ಲಿ ಮೊದಲ ಮುಂಗಾರು ಪೂರ್ವ ಸೈಕ್ಲೋನ್ ಆಗಿದೆ.
ಮೇ 26 ಮತ್ತು 27 ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ರೆಮಾಲ್ ಚಂಡಮಾರುತದ ಪ್ರಭಾವದಿಂದ ಮೇ 27 ಮತ್ತು 28 ರಂದು ಈಶಾನ್ಯ ಭಾರತದ ಕೆಲವು ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಈ ಚಂಡಮಾರುತದಿಂದ ಕರಾವಳಿ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ತಗ್ಗು ಪ್ರದೇಶಗಳು ಮುಳುಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣಗಳು ಮತ್ತು ದಕ್ಷಿಣ 24 ಪರಗಣಗಳ ಕರಾವಳಿ ಜಿಲ್ಲೆಗಳು ಮೇ 26 ಮತ್ತು 27 ರಂದು ರೆಡ್ ಅಲರ್ಟ್ ನೀಡಲಾಗಿದ್ದು, ಕೋಲ್ಕತ್ತಾ, ಹೌರಾ, ನಾಡಿಯಾ ಮತ್ತು ಪುರ್ಬಾ ಮೇದಿನಿಪುರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಗಂಟೆಗೆ 80 ರಿಂದ 90 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಮೇ 26 ಮತ್ತು 27 ರಂದು ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಹಲವು ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ.