ಬೆಂಗಳೂರು, ಮೇ 26 (DaijiworldNews/AA): ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ ಲೂಟಿ ಬೆಂಗಳೂರು ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಬಿಜೆಪಿ-ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುರಿದ ಎರಡು ಮೂರು ಮಳೆಗೇ ಮನೆಗಳಿಗೆ ನೀರು ತುಂಬಿದೆ. ಬಿಡಿಎನಲ್ಲಿ ಮೊನ್ನೆ ಬಹಳ ರಹಸ್ಯವಾಗಿ ಸಭೆ ಮಾಡಿದ್ದಾರಂತೆ. ಬೆಂಗಳೂರಿಗೆ ಇವರ ಕೊಡುಗೆ ಏನು? ಲೂಟಿ ಅಷ್ಟೇ ಎಂದು ಡಿಕೆಶಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಒಂದೂ ಹೊಸ ಅಭಿವೃದ್ಧಿ ಕೆಲಸವೂ ಆಗಿಲ್ಲ. ಈ ಸರ್ಕಾರಕ್ಕೆ ಜನರಿಗೆ ಅಕ್ಕಿ ಕೊಡುವ ಯೋಗ್ಯತೆ ಇಲ್ಲ. ಐದು ಕೆಜಿ ಅಕ್ಕಿಯ 170 ರೂ. ಹಣವನ್ನು ಮೂರು ತಿಂಗಳಿಂದ ಕೊಟ್ಟಿಲ್ಲ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿಲ್ಲ. ಬಿತ್ತನೆ ಬೀಜದ ಬೆಲೆ 70% ಏರಿಕೆ ಮಾಡಿದ್ದಾರೆ. ರೈತರಿಗೆ ಗೊಬ್ಬರ ಅಭ್ಯವಿಲ್ಲದಂತಾಗಿದೆ. ರೈತರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.