ಬೆಂಗಳೂರು, ಮೇ 26 (DaijiworldNews/AK):ಅನುದಾನವನ್ನೇ ಕೊಡದ ಬ್ರ್ಯಾಂಡ್ ಬೆಂಗಳೂರು ನಮಗೆ ಬೇಡ ಎಂದು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಳೆ ನೀರು ಎಲ್ಲ ಮನೆಗಳಿಗೆ ನುಗ್ಗಿ ಅಪಾರ ಹಾನಿ ಆಗಿದೆ. ನಗರದ ಹೊಂಡ-ಗುಂಡಿಗಳನ್ನು ಮುಚ್ಚಲೂ ಇವರ ಬಳಿ ದುಡ್ಡಿಲ್ಲ. ಸರಕಾರದ ಧೋರಣೆಯನ್ನು ಖಂಡಿಸಿ ನಾಳೆ (ಮೇ 28) ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವಿವರಿಸಿದರು.
ಈ ಸರಕಾರ ಬಂದ ಬಳಿಕ ರಸ್ತೆ ಕಾಮಗಾರಿಗಳು ನಡೆದಿಲ್ಲ. ಹೊಸ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯ ನಡೆದಿಲ್ಲ ಎಂದು ಟೀಕಿಸಿದರು. ಅಭಿವೃದ್ಧಿ ಕಾಮಗಾರಿಗಳನ್ನೇ ಮಾಡದ ಈ ಸರಕಾರದ ವಿರುದ್ಧ ಒಂದು ದೊಡ್ಡ ಪ್ರತಿಭಟನೆಯನ್ನು ನಾಳೆ ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಿದ್ದೇವೆ ಎಂದರು.
ಫ್ರೀಡಂ ಪಾರ್ಕಿನಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯುವ ಹೋರಾಟದಲ್ಲಿ ಬಿಜೆಪಿಯ ಬೆಂಗಳೂರಿನ ಎಲ್ಲ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ಬೆಂಗಳೂರು ಮಹಾನಗರದ ಕಮೀಷನರ್ಗೆ ಮನವಿಯೊಂದನ್ನು ಕೊಡುವ ಚಿಂತನೆ ನಡೆದಿದೆ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆಯ ನಮ್ಮ ಮಾಜಿ ಸದಸ್ಯರು, ಪಕ್ಷದ ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದರು.ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಹಾಲು ಉತ್ಪಾದಕರ ಪ್ರಕೋಷ್ಠದ ರಾಜ್ಯ ಮಾಜಿ ಸಂಚಾಲಕ ಎಂ.ಆರ್. ವೆಂಕಟೇಶ್, ಪ್ರಮುಖರು ಇದ್ದರು.