ರಾಯ್ಪುರ,ಮೇ 27 (DaijiworldNews/AK): ಸಾಂಪ್ರದಾಯಿಕ ವೈದ್ಯ ವೃತ್ತಿಗಾರರಾದ ಹೇಮಚಂದ್ ಮಾಂಝಿ ಅವರು ತಮ್ಮ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ನಕ್ಸಲ್ ಗುಂಪುಗಳಿಂದ ಹೆಚ್ಚುತ್ತಿರುವ ಬೆದರಿಕೆಗಳಿಂದ ಮನನೊಂದು ಮಾಂಝಿ ಈ ತೀರ್ಮಾನ ಮಾಡಿದ್ದಾರೆ. ಇದು ಅವರ ಸುರಕ್ಷತೆಯ ಬಗ್ಗೆ ಭಯಪಡುವಂತೆ ಮಾಡಿದೆ. ಮಾಂಝಿ ಅವರು ಸಾಂಪ್ರದಾಯಿಕ ಔಷಧಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಅವರ ಸೇವೆ ಸ್ಥಳೀಯ ಚಿಕಿತ್ಸಾ ಪದ್ಧತಿಗಳನ್ನು ಸಂರಕ್ಷಿಸುವಲ್ಲಿ , ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಮುಖ್ಯ ಪಾತ್ರವಹಿಸಿದೆ.
ಈ ಸಂಬಂಧ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಡಾ. ಮಾಂಝಿ ಮತ್ತೊಮ್ಮೆ ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದರು. ಕಬ್ಬಿಣದ ಅದಿರು ಗಣಿಯೊಂದಿಗೆ ತನಗೆ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಗ್ರಾಮಸ್ಥರಿಗೆ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು. ಇದೇ ವೇಳೆ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಲು ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಯನ್ನು ನಿಲ್ಲಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು.
ನಾನು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ. ಯಾಕೆಂದರೆ ಮಾವೋವಾದಿಗಳು ನನಗೆ ರಾಷ್ಟ್ರಪತಿಗಳಿಂದ ಪ್ರಶಸ್ತಿ ಹೇಗೆ ಸಿಕ್ಕಿತು ಎಂದು ಪ್ರಶ್ನಿಸುತ್ತಾರೆ. ನಾನು 20 ವರ್ಷ ವಯಸ್ಸಿನವನಾಗಿದ್ದಾಗಿನಿಂದ ನಾನು ಜನರ ಸೇವೆಗಾಗಿ ಪ್ರಶಸ್ತಿಯನ್ನು ಪಡೆದಿದ್ದೇನೆ. ಆದರೆ ನಾನು ಈ ಪ್ರಶಸ್ತಿಗೆ ಬೇಡಿಕೆ ಇಟ್ಟಿಲ್ಲ ಎಂದರು.