ಚಿಕ್ಕಬಳ್ಳಾಪುರ, ಮೇ 28(DaijiworldNews/AA): ನಮ್ಮ ಮನವಿಗೆ ಓಗೊಟ್ಟು ವಿಚಾರಣೆಗೆ ಹಾಜರಾಗುವುದಾಗಿ ಪ್ರಜ್ವಲ್ ಹೇಳಿದ್ದಾನೆ. ಇದು ನಮಗೂ ಸಮಾಧಾನ ತಂದಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗಬೇಕು. ತನಿಖೆಗೆ ಸಹಕಾರ ನೀಡಬೇಕು ಎಂದು ದೇವೇಗೌಡರು ಪ್ರಜ್ವಲ್ಗೆ ಎಚ್ಚರಿಕೆ ನೀಡಿದ್ದರು. ನಾನು ಸಹ ಮನವಿ ಮಾಡಿದ್ದೆ. ಜೆಡಿಎಸ್ ಕಾರ್ಯಕರ್ತರ ನೋವಿಗೆ ಸ್ಪಂದಿಸಿ ಕ್ಷಮೆಯಾಚಿಸಲು ಹೇಳಿದ್ದೆವು. ಅದರಂತೆ ಕ್ಷಮೆ ಕೋರಿದ್ದಾನೆ. ಪಕ್ಷದ ಕಾರ್ಯಕರ್ತರ ಮೇಲೆ ಮಮತೆ ಇದೆ ಎಂದು ಸಾಬೀತುಪಡಿಸಿದ್ದಾನೆಂದು ನನಗೆ ಸಮಾಧಾನವಿದೆ ಎಂದು ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿದರೆ ಪೆನ್ಡ್ರೈವ್ ಕೊಟ್ಟ ಕಾಂಗ್ರೆಸ್ ನವರೇ ಸಿಕ್ಕಿಬೀಳುತ್ತಾರೆ. ಕೆಲವು ಸಚಿವರು ತಮ್ಮ ಇಲಾಖೆ ನಿರ್ವಹಣೆಗಿಂತ ಪ್ರಜ್ವಲ್ ಪ್ರಕರಣದ ವಕೀಲಿಕೆ ಮಾಡುತ್ತಿದ್ದಾರೆ. ಶುಂಠಿ ಬೆಳೆದ ರೈತರು ಬೀದಿಗೆ ಬಂದಿದ್ದಾರೆ. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಪ್ರಜ್ವಲ್ ಪ್ರಕರಣಕ್ಕೆ ದೊಡ್ಡ ಪ್ರಚಾರ ನೀಡುತ್ತಿದೆ. ಹೀಗೆ ಮಾಡುವುದರಿಂದ ಏನು ಸಾಧನೆ ಮಾಡಿದಂತಾಗುತ್ತದೆ. ಇದು ಯಾರೂ ಬೆನ್ನು ತಟ್ಟುವಂತಹ ಪ್ರಕರಣವಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ತನಿಖೆ ನಡೆಯುತ್ತದೆಯೇ ಎನ್ನುವುದೇ ನನ್ನ ಅನುಮಾನ ಎಂದಿದ್ದಾರೆ.