ಬೆಂಗಳೂರು,ಮೇ 28 (DaijiworldNews/ AK):ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿನ ಸಂತ್ರಸ್ತೆಯೊಬ್ಬರ ಅಪಹರಣದ ಆರೋಪದಡಿ ಭವಾನಿ ರೇವಣ್ಣ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಎಸ್ಐಟಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಈ ಸಂಬಂಧ ಪ್ರಜ್ವಲ್ ರೇವಣ್ಣ ಅವರ ತಾಯಿಯೂ ಆದ ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು, ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ (ಸಿಸಿಎಚ್–82) ನ್ಯಾಯಾಧೀ ಶ ಸಂತೋಪ್ ಗಜಾನನ ಭಟ್ ಸೋಮವಾರ ವಿಚಾರಣೆ ನಡೆಸಿದರು.
ಮಧ್ಯಂತರ ಮತ್ತು ನಿಗದಿತ (ರೆಗ್ಯುಲರ್) ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ಎಂದು ಪ್ರಾಸಿಕ್ಯೂಷನ್ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದಾರೆ.
ಸಂತ್ರಸ್ತೆ ಮಹಿಳೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 364ಎ, 365 ಮತ್ತು 34 ಅಡಿ ಎಫ್ಐಆರ್ ದಾಖಲಿಸಲಾಗಿದೆ.