ಕೋಲ್ಕತ್ತಾ, ಮೇ 28(DaijiworldNews/AA): ರೆಮಲ್ ಚಂಡಮಾರುತದ ಪ್ರಭಾವಕ್ಕೆ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಜನರು ತತ್ತರಿಸಿ ಹೋಗಿದ್ದಾರೆ. ಈ ಚಂಡಮಾರುತವು ಬಾಂಗ್ಲಾದೇಶ ಮತ್ತು ಭಾರತದಾದ್ಯಂತ 16 ಜನರನ್ನು ಬಲಿ ತೆಗೆದುಕೊಂಡಿದೆ.
ರೆಮಲ್ ಚಂಡಮಾರುತದಿಂದ ಬಂಗಾಳ ಕೊಲ್ಲಿಯ ಕರಾವಳಿಯಲ್ಲಿ ಭೂಕುಸಿತ ಉಂಟಾಗಿದೆ. ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಭಾಗದಲ್ಲಿ ಸುರಿದ ಭಾರೀ ಮಳೆಗೆ ಹಲವಾರು ಮಂದಿ ಗಾಯಗೊಂಡಿದ್ದಾರೆ. ಜೊತೆಗೆ ಅನೇಕ ಮನೆಗಳು, ಮರಗಳು ಧರೆಗುರಿಳಿದ್ದು, ಅಪಾರ ನಷ್ಟ ಸಂಭವಿಸಿದೆ. ಭಾರೀ ಮಳೆಯಿಂದಾಗಿ ನದಿಯಲ್ಲಿನ ನೀರಿನ ಮಟ್ಟ ಹೆಚ್ಚಾಗಿದ್ದು, ವಿದ್ಯುತ್ ಮಾರ್ಗಗಳಿಗೆ ತೀವ್ರ ಹಾನಿಯುಂಟಾಗಿದೆ ಎಂದು ತಿಳಿದುಬಂದಿದೆ.
ಸಾವನ್ನಪ್ಪಿದ 16 ಜನರ ಪೈಕಿ 6 ಮಂದಿ ಪಶ್ಚಿಮ ಬಂಗಾಳದವರಾದರೆ, ಉಳಿದ 10 ಮಂದಿ ಬಾಂಗ್ಲಾದೇಶದವರಾಗಿದ್ದಾರೆ. ಮೃತಪಟ್ಟ ಕೆಲವರು ಸಂತ್ರಸ್ತ ಶಿಬಿರಕ್ಕೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಮನೆ ಕುಸಿದು, ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಹಲವು ಕರಾವಳಿ ಸ್ಥಳಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕನಿಷ್ಠ 1,200 ವಿದ್ಯುತ್ ಕಂಬಗಳು, ಅನೇಕ ಮರಗಳು ಧರೆಗುರುಳಿದೆ. ಇದರಿಂದಾಗಿ ಸಾವಿರಾರು ಜನರು ವಿದ್ಯುತ್ ಇಲ್ಲದೆ ಪರದಾಡುವಂತಾಗಿದೆ. ಇನ್ನು ಅಪಾಯ ತಪ್ಪಿಸುವ ಉದ್ದೇಶದಿಂದ ಕೆಲವು ಪ್ರದೇಶಗಳಿಗೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.