ರಾಜಸ್ಥಾನ, ಮೇ 29 (DaijiworldNews/MS): ಯುಪಿಎಸ್ ಕ್ಲಿಯರ್ ಮಾಡುವುದೆಂದರೆ ಅಷ್ಟು ಸುಲಭದ ಕೆಲಸವಲ್ಲ. ಯುಪಿಎಸ್ಸಿ ಪಾಸ್ ಮಾಡಲು ಸಾಕಷ್ಟು ಪರಿಶ್ರಮ ಹಾಗೂ ನಿರಂತರ ಓದಬೇಕು. ಅಲ್ಲದೇ ಕುಟುಂಬದ ಬೆಂಬಲ ಮತ್ತು ಆರ್ಥಿಕ ಭದ್ರತೆ ಇಲ್ಲದವರು ಪರೀಕ್ಷೆಯ ಬಗ್ಗೆ ಯೋಚಿಸುವುದಿಲ್ಲ. ಏಕೆಂದರೆ ಪುಸ್ತಕಗಳು ಮತ್ತು ಸಾಮಗ್ರಿಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಜಸ್ಥಾನದ ಬೀದಿಬದಿ ವ್ಯಾಪಾರಿಯ ಮಗಳಾದ ದೀಪೇಶ್ ಕುಮಾರಿ ಸಿವಿಲ್ ಪರೀಕ್ಷೆಯಲ್ಲಿ 93ನೇ ಶ್ರೇಯಾಂಕ ಮಾಡಿದ್ದಾರೆ.ಅವರ ಸಾಧನೆಯನ್ನು ತಿಳಿಯೋಣ.
ರಾಜಸ್ಥಾನದ ಭರತ್ಪುರದ ಅಟಲ್ ಬ್ಯಾಂಡ್ ಪ್ರದೇಶದವರಾದ ಗೋವಿಂದ್ ಅವರು ಕಳೆದ 25 ವರ್ಷಗಳಿಂದ ಬೀದಿಗಳಲ್ಲಿ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಅವರಿಗೆ ಐವರು ಮಕ್ಕಳಿದ್ದಾರೆ. ಕುಟುಂಬದ ಏಕೈಕ ಆಸರೆ ಎಂದರೆ ಅವರ ವ್ಯಾಪಾರ ಮಾತ್ರ. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ಮಕ್ಕಳ ವಿದ್ಯಾಭ್ಯಾಸದಲ್ಲಿ ಗೋವಿಂದ್ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ಅವರ ಎಲ್ಲಾ ಮಕ್ಕಳು ಕಷ್ಟಪಟ್ಟು ಓದಿದ್ದಾರೆ.
ಗೋವಿಂದ್ ಅವರ ಐದು ಮಕ್ಕಳಲ್ಲಿ ದೀಪೇಶ್ ಕುಮಾರಿ ಹಿರಿಯ ಮಗಳು. ಅವಳು ಬಾಲ್ಯದಿಂದಲೂ ತುಂಬಾ ಬುದ್ಧಿವಂತೆ ಮತ್ತು ಕ್ರೀಯಾಶೀಲ ವಿದ್ಯಾರ್ಥಿಯಾಗಿದ್ದಳು. ದೀಪೇಶ್ ಶಿಶು ಆದರ್ಶ ವಿದ್ಯಾ ಮಂದಿರದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. 10 ನೇ ತರಗತಿಯಲ್ಲಿ 98% ಮತ್ತು 12 ನೇ ತರಗತಿಯಲ್ಲಿ 89% ಅಂಕಗಳನ್ನು ಗಳಿಸಿದ್ದಾರೆ. ಬಳಿಕ ಅವರು ಸಿವಿಲ್ ಇಂಜಿನಿಯರಿಂಗ್ ಓದಲು ಬಯಸಿದ್ದರು. ಅದಕ್ಕಾಗಿ ಜೋಧಪುರ ಕಾಲೇಜಿಗೆ ಸೇರಿದರು. ನಂತರ ಐಐಟಿ ಬಾಂಬೆಯಲ್ಲಿ ಎಂಟೆಕ್ ಮಾಡಿದರು.
ಎಂಟೆಕ್ ಒದಿದ ದಿಪೇಶ್ ಕುಮಾರಿ ಗೆ ತುಂಬಾ ಸುಲಭವಾಗಿ ದೊಡ್ಡ ವೇತನದ ಕೆಲಸ ಸಿಕ್ಕಿತು. ಆದರೆ ನಾಗರಿಕ ಸೇವೆಗೆ ಸೇರಬೇಕೆಂಬುದು ಆಕೆಯ ಕನಸಾಗಿತ್ತು. ಹಾಗಾಗಿ ಕೆಲಸದ ಯೋಚನೆ ಬಿಟ್ಟು ದೀಪೇಶ್ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (UPSC) ಪರೀಕ್ಷೆಯ ತಯಾರಿ ಪ್ರಾರಂಭಿಸಿದರು. ಕಠಿಣ ಪರಿಶ್ರಮದಿಂದ ಎರಡನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. 2021ರ ಬ್ಯಾಚ್ನಲ್ಲಿ ಆಲ್ ಇಂಡಿಯಾ 93 ನೇ ರ್ಯಾಂಕ್ ಪಡೆಯುವ ಮೂಲಕ IAS ಅಧಿಕಾರಿಯಾದರು. ಮಗಳು ಐಎಎಸ್ ಆದ ಮೇಲೂ ಗೋವಿಂದ್ ತಮ್ಮ ತಿಂಡಿ ಅಂಗಡಿಯನ್ನು ಮುಂದುವರೆಸಿದ್ದಾರೆ.