ಬೆಂಗಳೂರು, ,ಮೇ 29 (DaijiworldNews/ AK): ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರವಾಗಿ ಮೊದಲೇ ಹೈ ಪವರ್ ಕಮಿಟಿ ನೇಮಿಸಿ ಸಲಹೆ ಪಡೆಯಬೇಕಿತ್ತು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಕೆಲಸ ಮಾಡಿ ಅನೇಕ ಅನುಭವ ಇರುವವರಿಗೆ ಎಂಎಲ್ಸಿಯಾಗಲು ಅವಕಾಶ ಕೊಡಬೇಕು. ಆದರೆ ಅವರು ನಮ್ಮ ಸಲಹೆಯನ್ನು ಕೇಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಸ್ಕ್ರೀನಿಂಗ್ ಮಾಡುವುದು ಬಹಳ ಕಷ್ಟ. ಮೊದಲೇ ಹೈ ಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಈಗ ಕಾಲ ಮೀರಿ ಹೋಗಿದೆ. ಸಿಎಂ ಡಿಸಿಎಂ ದೆಹಲಿಗೆ ಹೋಗಿ ಬಿಟ್ಟಿದ್ದಾರೆ ಎಂದರು.
ಇನ್ನು ಮೇಲೆ ಯಾವುದಾದರೂ ನೇಮಕಕ್ಕೆ ಹೈ ಪವರ್ ರೀತಿಯ ಕಮಿಟಿ ಮಾಡಬೇಕಾ ಎಂಬ ಪ್ರಶ್ನೆಗೆ ನೋಡೋಣ ಎಂದು ಉತ್ತರಿಸಿದರು. ಇಲಾಖೆ ವಿಚಾರವಾಗಿ ನಾನು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇನೆ. ಭೇಟಿ ವೇಳೆ ಪರಿಷತ್ ವಿಚಾರ ಚರ್ಚೆಯಾಗಿಲ್ಲ. ಒಟ್ಟು 7 ಸ್ಥಾನಗಳಿಗೆ ಎಷ್ಟು ಅರ್ಜಿಗಳು ಬಂದಿವೆ ಎನ್ನುವುದು ನನಗೆ ಗೊತ್ತಿಲ್ಲ ಎಂದು ಉತ್ತರಿಸಿದರು.