ನವದೆಹಲಿ, ಮೇ 29(DaijiworldNews/AA): ಆಪ್ ಕಾಂಗ್ರೆಸ್ನೊಂದಿಗೆ ಶಾಶ್ವತವಾಗಿ ದಾಂಪತ್ಯದಲ್ಲಿರಲು ವಿವಾಹವಾಗಿಲ್ಲ. ಸದ್ಯ ಬಿಜೆಪಿಯನ್ನು ಸೋಲಿಸುವುದು ಮತ್ತು ಪ್ರಸ್ತುತ ಆಡಳಿತದಲ್ಲಿರುವ ಸರ್ವಾಧಿಕಾರಿ ಮತ್ತು ಗೂಂಡಾಗಿರಿಯನ್ನು ಕೊನೆಗೊಳಿಸುವುದು ನಮ್ಮ ಗುರಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಪ್ ಸರ್ಕಾರ ಮೈತ್ರಿ ಮಾಡಿಕೊಂಡಿದೆ. ದೇಶವನ್ನು ಉಳಿಸುವುದು ಮುಖ್ಯ. ಬಿಜೆಪಿಯನ್ನು ಸೋಲಿಸಲು ಮತ್ತು ಒಬ್ಬ ಅಭ್ಯರ್ಥಿಯನ್ನು ಹಾಕಲು ಆಪ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಇನ್ನು ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಮಾತನಾಡಿದ ಅವರು, ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಯಾವುದಕ್ಕೂ ನಾನು ಅಂಜುವುದಿಲ್ಲ. ನಾನು ಜೈಲಿಗೆ ಮತ್ತೆ ಮರಳಲು ತೊಂದರೆಯಿಲ್ಲ. ಭಾರತದ ಭವಿಷ್ಯವು ಅಪಾಯದಲ್ಲಿದೆ. ಬಿಜೆಪಿ ನನ್ನನ್ನು ಎಷ್ಟು ದಿನ ಬೇಕಾದರೂ ಜೈಲಿಗೆ ಹಾಕಲಿ, ನಾನು ಹೆದರುವುದಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆ ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನಿನ ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇದೀಗ ಸುಪ್ರೀಂಕೋರ್ಟ್ ನಿರ್ದೇಶನದಂತೆ ಜೂನ್ 2 ರಂದು ತಿಹಾರ್ ಜೈಲಿಗೆ ಮತ್ತೆ ಮರಳಬೇಕಾಗಿದೆ.