ಬೆಂಗಳೂರು,ಮೇ 28 (DaijiworldNews/ AK): ಯುಕವರು, ಪದವೀಧದರು ಮತ್ತು ಶಿಕ್ಷಕರ ಪರವಾಗಿ ಬಿಜೆಪಿ ಸದಾ ನಿಂತಿದೆ. ಹಲವಾರು ಸುಧಾರಣೆಗಳನ್ನು ತಂದಿದೆ. ಈ ಬಾರಿ ನಡೆಯುವ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟವನ್ನು ಬೆಂಬಲಿಸಬೇಕು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಮನವಿ ಮಾಡಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ- ಜೆಡಿಎಸ್ ಮೈತ್ರಿ ಪಕ್ಷಗಳು ಪದವೀಧರರ ವಿಚಾರ, ಶಿಕ್ಷಕರ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿವೆ. ಹಲವು ಸುಧಾರಣೆ, ಪ್ರಗತಿ, ನೂತನ ಕಾಯ್ದೆ ಕಾನೂನು ಜಾರಿಗೆ ತಂದಿವೆ ಎಂದು ನುಡಿದರು.
ಇವೆರಡು ಪಕ್ಷಗಳು ಶಿಕ್ಷಕರು, ಪದವೀಧರರ ಪರವಾಗಿ ನಿರಂತರವಾಗಿ ಶ್ರಮಿಸುತ್ತಿವೆ ಎಂದು ವಿವರಿಸಿದರು.ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಮತ್ತು ಆಡಳಿತ ನೀತಿ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಕರ ಕುರಿತು ಕಾಳಜಿ, ಗೌರವ ನೀಡದೆ ಕಾಂಗ್ರೆಸ್ ಆಡಳಿತ ನಡೆಸಿದೆ. ಕಾಂಗ್ರೆಸ್ ಪಕ್ಷವು ಶಿಕ್ಷಕರ, ಪದವೀಧರರ ವಿರುದ್ಧವಾಗಿ ನೀತಿಗಳನ್ನು ಹೊಂದಿದೆ. ಆದರೆ, ಬಿಜೆಪಿ ಶಿಕ್ಷಕರ ಪರವಾಗಿ ಹಲವಾರು ಸುಧಾರಣೆಗಳನ್ನು, ಅನುದಾನಿತ ಸಂಸ್ಥೆಗಳಲ್ಲಿ ಹುದ್ದೆ ಭರ್ತಿ ಮಾಡುವ ಕಾರ್ಯ ಮಾಡಿದೆ. ಕಾಂಗ್ರೆಸ್ ಪಕ್ಷದ ಆಡಳಿತ ನೇಮಕಾತಿಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು ಎಂದರು.
ಯಡಿಯೂರಪ್ಪ ಅವರ ಅವಧಿಯಲ್ಲಿ ಹುದ್ದೆ ಭರ್ತಿಗೆ ಅವಕಾಶ ಮಾಡಿಕೊಡಲಾಯಿತು. ಅನುದಾನ ಕೊಡುವ ವಿಚಾರದಲ್ಲೂ ಅವಕಾಶ, ಆಜ್ಞೆ ಮಾಡಲಾಗಿದೆ. ಜ್ಞಾನ ಆಯೋಗ ಆರಂಭ, ಮೂರನೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ತರುವ ಮೂಲಕ ದೊಡ್ಡ ಸುಧಾರಣೆ ಮಾಡಲಾಗಿದೆ ಎಂದು ವಿವರಿಸಿದರು.
ಶಿಕ್ಷಣ ವಾತಾವರಣವನ್ನು ಹದಗೆಡಿಸಿದ್ದಾರೆ. ಯುವ ನೀತಿಯಲ್ಲೂ ಡೋಂಗಿ ನೀತಿ ಜಾರಿ ಮಾಡಿದ್ದಾರೆ ಎಂದು ತಿಳಿಸಿದರು.
ನಮ್ಮ ಸರಕಾರ ಪಾಲಿಟೆಕ್ನಿಕ್, ಐಟಿಐ ಗುಣಮಟ್ಟ ಹೆಚ್ಚಿಸಿ ಅಡ್ಮಿಶನ್ ಶೇ 100ಕ್ಕೆ ಹೆಚ್ಚಳವಾಗಿದೆ. ಇಲ್ಲಿ ಕಲಿತ ಎಲ್ಲರಿಗೂ ಉದ್ಯೋಗ ಸಿಗುತ್ತಿದೆ. ಎಲ್ಲ ಸರಕಾರಿ ಕಾಲೇಜುಗಳಲ್ಲಿ ಶೇ 87ರಷ್ಟು ಅಕ್ರೆಡಿಷನ್ ಕೊಡಿಸಿದ್ದೇವೆ. ಇದೊಂದು ದೊಡ್ಡ ಸಾಧನೆ. ಶಿಕ್ಷಕರ ನೇಮಕಾತಿ ವೇಳೆ ಪಾರದರ್ಶಕ ಕೌನ್ಸೆಲಿಂಗ್ ನಡೆಸಿದ್ದೇವೆ ಎಂದು ವಿವರ ನೀಡಿದರು.