ಮಂಡ್ಯ, ಮೇ 30 (DaijiworldNews/MS): ಪಶ್ಚಿಮ ಬಂಗಾಳದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹಿಂದುಳಿದ ವರ್ಗದ ಮೀಸಲಾತಿಯನ್ನು ಅಲ್ಪಸಂಖ್ಯಾತರಿಗೆ ನೀಡಲು ಅಲ್ಲಿನ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕರ್ತರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಇಂದ್ರೇಶ್, ಹಿಂದುಳಿದ ವರ್ಗದವರ ಮೀಸಲಾತಿ ಸಂವಿಧಾನ ಬದ್ಧ ಹಕ್ಕಾಗಿದ್ದು,ಇದನ್ನು ಕಸಿಯುವ ಪ್ರಯತ್ನವನ್ನು ಬಿಜೆಪಿ ವಿರೋಧಿಸಲಿದೆ. ರಾಜ್ಯದಲ್ಲಿ ಸಂವಿಧಾನ ವಿರೋಧಿ ಮೀಸಲಾತಿ ವ್ಯವಸ್ಥೆ ಜಾರಿಗೆ ಅವಕಾಶ ಕೊಡುವುದಿಲ್ಲ ಎಂದರು.
ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕೆ.ಆರ್. ನರಸಿಂಹಾಚಾರ್, ಧರ್ಮದ ಹೆಸರಿನಲ್ಲಿ ಮೀಸಲಾತಿ ನೀಡುವುದನ್ನು ಬಿಜೆಪಿ ವಿರೋಧಿಸಲಿದೆ ಎಂದರು. ರಾಜ್ಯದ ಹಿಂದುಳಿದ ಘಟಕದ ಕಾರ್ಯಕಾರಣಿ ಸದಸ್ಯ ನರಸಿಂಹ ಮೂರ್ತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನ್ಯಾಯಾಲಯದ ಆದೇಶ ಉಲ್ಲಂಘಿಸುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರಗೊಳ್ಳಲಿದೆ ಎಂದು ಹೇಳಿದರು