ನವದೆಹಲಿ, ಮೇ 30 (DaijiworldNews/AK):ಸಾರ್ವಜನಿಕ ಭಾಷಣದ ಘನತೆಯನ್ನು ಪ್ರಧಾನಿ ನರೇಂದ್ರ ಮೋದಿ ಕಡಿಮೆ ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮೇಲೆ ತೀವ್ರವಾಗಿ ಹರಿಹಾಯ್ದಿರುವ ಮನಮೋಹನ್ ಸಿಂಗ್ ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಬಿಜೆಪಿ ಸರ್ಕಾರವು ಅಗ್ನಿವೀರ್ ಯೋಜನೆಯನ್ನು ಜಾರಿಗೆ ತಂದಿದೆ. ಅದು ದೇಶಭಕ್ತಿಯ ಮೌಲ್ಯ ಎಂದು ಭಾವಿಸುತ್ತದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ.
ಜೂನ್ 1ರಂದು ನಡೆಯಲಿರುವ 7ನೇ ಹಂತದ ಲೋಕಸಭೆ ಚುನಾವಣೆಗೂ ಮುನ್ನ ಪಂಜಾಬ್ನ ಮತದಾರರಿಗೆ ಮನವಿ ಮಾಡಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪ್ರಧಾನಿ ಮೋದಿ ಅತ್ಯಂತ ಕೆಟ್ಟ ರೂಪದಲ್ಲಿ ದ್ವೇಷ ಭಾಷಣಗಳಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿಯ ಅವರ ರಾಜಕೀಯ ಭಾಷಣವನ್ನು ನಾನು ಗಮನಿಸುತ್ತಿದ್ದೇನೆ. ಅದು ಸಂಪೂರ್ಣವಾಗಿ ದೇಶವನ್ನು ವಿಭಜಿಸುವ ಸ್ವಭಾವವಾಗಿದೆ. ಮೋದಿ ಸಾರ್ವಜನಿಕ ಭಾಷಣದ ಘನತೆಯನ್ನು ಕಡಿಮೆ ಮಾಡಲು ಮತ್ತು ಆ ಮೂಲಕ ಪ್ರಧಾನ ಮಂತ್ರಿಯ ಕಛೇರಿಯ ಘನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಹಿಂದೆ ಯಾವ ಪ್ರಧಾನ ಮಂತ್ರಿಯೂ ಇಂತಹ ದ್ವೇಷಪೂರಿತ, ಅಸಂಸದೀಯ ಮತ್ತು ಒರಟಾದ ಪದಗಳನ್ನು ಹೇಳಲಿಲ್ಲ. ಇದು ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸುತ್ತದೆ. ಅವರು ನನ್ನ ವಿರುದ್ಧ ಕೆಲವು ಸುಳ್ಳು ಹೇಳಿಕೆಗಳನ್ನು ಸಹ ನೀಡಿದ್ದಾರೆ. ನಾನು ನನ್ನ ಜೀವನದಲ್ಲಿ ಒಂದು ಸಮುದಾಯದಿಂದ ಇನ್ನೊಂದು ಸಮುದಾಯವನ್ನು ಪ್ರತ್ಯೇಕಿಸಿಲ್ಲ. ಆದರೆ, ಬಿಜೆಪಿ ಆ ಕೆಲಸವನ್ನು ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಪಿಸಿದ್ದಾರೆ.