ನವದೆಹಲಿ, ಮೇ 31 (DaijiworldNews/AK): ಯುಪಿಎಸ್ಸಿ ಪರೀಕ್ಷೆ ಬರೆಯುವ ಲಕ್ಷಾಂತರ ಮಂದಿ ಪೈಕಿ ಕೆಲವೇ ನೂರು ಅಭ್ಯರ್ಥಿಗಳು ಐಎಎಸ್ ಅಧಿಕಾರಿ ಆಗುತ್ತಾರೆ. ಪರೀಕ್ಷೆ ಬರೆಯಲು ಹೆಚ್ಚು ಶುಲ್ಕ ಇಲ್ಲವಾದರೂ ಪರೀಕ್ಷೆಗೆ ಸಿದ್ಧತೆಗೊಳ್ಳಲು ಅಭ್ಯರ್ಥಿಗಳು ಲಕ್ಷಾಂತರ ಹಣ ವ್ಯಯಿಸುತ್ತಾರೆ. ಆದರೂ ಐಎಎಸ್ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಆದರೆ, ಉತ್ತರ ಪ್ರದೇಶದ ಬಡವನೊಬ್ಬ ಕೋಚಿಂಗ್ ಸೆಂಟರ್ಗೆ ಹೋಗದೆಯೇ ಸ್ವಂತವಾಗಿ ಓದಿ ಐಎಎಸ್ ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಅವರೇ ಹಿಮಾಂಶು ಗುಪ್ತ. ಅವರ ಪ್ರೇರಕ ಕಥೆ ಇಲ್ಲಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯವರಾದ ಹಿಮಾಂಶು ಗುಪ್ತ ಅವರ ಜೀವನ ಬಹುಶಃ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಜೀವನಪಾಠ ಎನ್ನಲಾಗಿದೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ದಿನಗೂಲಿ ನೌಕರಿ ಮಾಡುತ್ತಿದ್ದ ಅಪ್ಪ ಕುಟುಂಬ ನಿರ್ವಹಣೆಗೆ ಒಂದು ಸಣ್ಣ ಚಹಾ ಅಂಗಡಿ ಇಟ್ಟಿದ್ದರು. ಹಿಮಾಂಶು ಗುಪ್ತ ಅವರು ಓದುವ ಜೊತೆಜೊತೆಗೆ ಚಹಾ ಮಾರುತ್ತಾ ಜೀವನ ನಡೆಸುತ್ತಿದ್ದರು. ಆದರೆ, ಅವರಲ್ಲಿನ ಛಲ ಯಾವ ಅಡೆತಡೆಗೂ ಜಗ್ಗಲಿಲ್ಲ. 2019ರ ಕೇಂದ್ರ ಲೋಕಸೇವ ಆಯೋಗದ ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ 304ನೇ ರ್ಯಾಂಕ್ ಪಡೆದರು.
ಬಡತನದ ಹಿನ್ನೆಲೆಯಲ್ಲಿ ಹಿಮಾಂಶು ಗುಪ್ತ ಅವರು ಕೋಚಿಂಗ್ ಸೇರುವ ಸ್ಥಿತಿಯಲ್ಲಿರಲಿಲ್ಲ. ಐಎಎಸ್ ಪರೀಕ್ಷೆಗೆ ತಾವೇ ಸ್ವಯಂ ಆಗಿ ಸಿದ್ಧತೆ ನಡೆಸಿದರು. ಚಹಾದಂಗಡಿಯಲ್ಲಿ ಕೂತಿರುವಾಗ ಅವರು ವೃಥಾ ಕಾಲಕ್ಷೇಪ ಮಾಡುತ್ತಿರಲಿಲ್ಲ. ಸಮಯ ಸಿಕ್ಕಾಗೆಲ್ಲಾ ದಿನಪತ್ರಿಕೆಗಳನ್ನ ಓದುವ ಹವ್ಯಾಸ ರೂಢಿಸಿಕೊಂಡಿದ್ದರು. ಮೊಬೈಲ್ನಲ್ಲೇ ಇಂಟರ್ನೆಟ್ ಮೂಲಕ ಪರೀಕ್ಷೆಗೆ ಬೇಕಿದ್ದ ನೋಟ್ಸ್ ಪಡೆಯುತ್ತಿದ್ದರು. ವಿಡಿಯೋಗಳನ್ನ ನೋಡುತ್ತಾ ಅಭ್ಯಾಸ ನಡೆಸುತ್ತಿದ್ದರಂತೆ.
ಹಿಮಾಂಶು ಗುಪ್ತ ಅವರು ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಪದವಿ ಮಾಡಿದರು. . ಕಾಲೇಜು ಪದವಿ ಬಳಿಕ ಅವರಿಗೆ ಒಳ್ಳೆಯ ಕೆಲಸ ಆಫರ್ ಬಂದಿತ್ತು. ಅದರೆ, ಸಿವಿಲ್ ಸರ್ವಿಸಸ್ ಪರೀಕ್ಷೆಯ ಗುರಿ ಹೊಂದಿದ್ದ ಹಿಮಾಂಶು ಅವರು ಕೆಲಸ ಸೇರಲಿಲ್ಲ. ಐಎಎಸ್ಗೆ ಸಿದ್ಧತೆ ನಡೆಸ ತೊಡಗಿದರು. ಜೀವನ ನಿರ್ವಹಣೆಗಾಗಿ ಅವರು ಸರ್ಕಾರಿ ಕಾಲೇಜೊಂದರಲ್ಲಿ ಸಂಶೋಧಕರಾಗಿ ಸೇರಿಕೊಂಡರು. ಇದರಿಂದ ಅವರಿಗೆ ಸ್ಟೈಪೆಂಡ್ ಬರತೊಡಗಿತು. ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಐಎಎಸ್ ಪರೀಕ್ಷೆಗೆ ಸಿದ್ಧವಾಗಲು ಅಗತ್ಯವಿದ್ದ ಶೈಕ್ಷಣಿಕ ಪರಿಸರ ಕೂಡ ಸಿಕ್ಕಿತು.
ಹಿಮಾಂಶು ಗುಪ್ತ ಮೊದಲ ಬಾರಿಗೆ ಸಿವಿಲ್ ಸರ್ವಿಸ್ ಪರೀಕ್ಷೆ ಬರೆದಾಗ ಒಳ್ಳೆಯ ರ್ಯಾಂಕ್ ಸಿಗಲಿಲ್ಲ. ಐಆರ್ಎಸ್ ಅಧಿಕಾರಿ ಸ್ಥಾನ ಸಿಕ್ಕಿತು. ಐಎಎಸ್ ಅಧಿಕಾರಿ ಆಗಬೇಕೆಂಬ ಛಲದಲ್ಲಿದ್ದ ಹಿಮಾಂಶು ಅವರು 2019ರ ಪರೀಕ್ಷೆಗೆ ಇನ್ನೂ ಉತ್ತಮವಾಗಿ ಸಿದ್ಧತೆ ನಡೆಸಿದರು. ಅವರಿಗೆ ಛಲಕ್ಕೆ ಫಲ ಸಿಕ್ಕಿತು. 304ನೇ ರ್ಯಾಂಕ್ ಪಡೆದು ಐಎಎಸ್ ಅಧಿಕಾರಿ ಆದರು.