ಬೆಂಗಳೂರು, ಜೂ 01(DaijiworldNews/AA): ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸುವಂತೆ ಒತ್ತಾಯಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇಂದು ಪತ್ರ ಬರೆದಿದ್ದಾರೆ.
ಯತ್ನಾಳ್ ಬರೆದಿರುವ ಪತ್ರದಲ್ಲಿ, ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಬೇಕಿದೆ. ಹಗರಣದ ತನಿಖೆಯನ್ನು ನಡೆಸುವಂತೆ ಕೋರಿ ಯೂನಿಯನ್ ಬ್ಯಾಂಕ್ ಅಧಿಕಾರಿಗಳು ಈಗಾಗಲೇ ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಕ್ರಮದಲ್ಲಿ ಭಾಗಿಯಾಗಿರುವವರನ್ನು ಪತ್ತೆಹಚ್ಚಿ, ಕಾನೂನು ಕ್ರಮದ ವ್ಯಾಪ್ತಿಗೆ ಒಳಪಡಿಸಲು ಅನುಕೂಲವಾಗುವಂತೆ ಕೂಡಲೇ ಹಗರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಅಕ್ರಮಕ್ಕೆ ಸಹಕರಿಸುವಂತೆ, ಅಧಿಕಾರಿಗಳ ಮೇಲೆ ಒತ್ತಡ ಹೇರುವುದು, ಲಂಚ, ಹಣಕಾಸು ಅವ್ಯವಹಾರಗಳ ಪ್ರಕರಣಗಳು ಏರಿಕೆಯಾಗುತ್ತಿದೆ. ಹಿರಿಯ ಅಧಿಕಾರಿಗಳು, ಸಚಿವರು ಮತ್ತು ನಿರ್ಧಾರ ಕೈಗೊಳ್ಳುವವರ ಒತ್ತಡಗಳಿಂದಾಗಿಯೇ ಸರ್ಕಾರಿ ನೌಕರರು, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2019ರಲ್ಲಿ ಸಚಿವರಾಗಿದ್ದ ಜಿ. ಪರಮೇಶ್ವರ ಅವರ ಆಪ್ತ ಸಹಾಯಕ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2016ರಲ್ಲಿ ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ. ಗಣಪತಿ ಆಗಿನ ಸಚಿವರು ಮತ್ತು ಐಪಿಎಸ್ ಅಧಿಕಾರಿಗಳ ಒತ್ತಡದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದರು. ಇನ್ನು ಇದೇ ಮೇ 30ರಂದು ದಾವಣಗೆರೆಯಲ್ಲಿ ಪಿ.ಎಸ್. ಗೌಡರ್ ಎಂಬ ಗುತ್ತಿಗೆದಾರ ಕೆಆರ್ಐಡಿಎಲ್ ಅಧಿಕಾರಿಗಳ ಕಿರುಕುಳಕ್ಕೆ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸಚಿವರು ಮತ್ತು ಅಧಿಕಾರಿಗಳ ಒತ್ತಡ ಸಹಿಸಲಾಗದೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಗಮದ ಹಣವನ್ನು ಅಕ್ರಮವಾಗಿ ಕೆಲವು ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವಂತೆ ಒಬ್ಬ ಸಚಿವ ಹಾಗೂ ಕೆಲವು ಅಧಿಕಾರಿಗಳು ಚಂದ್ರಶೇಖರನ್ ಮೇಲೆ ತೀವ್ರ ಒತ್ತಡ ಹಾಕಿದ್ದಾರೆ. ಇದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಬಳಿಕವೇ ನಿಗಮದ 88.62 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ನಿಗಮದ ಹಣ ವರ್ಗಾವಣೆಯ ವಹಿವಾಟುಗಳು ವಂಚನೆಯಿಂದ ಕೂಡಿವೆ ಎಂದು ಯೂನಿಯನ್ ಬ್ಯಾಂಕ್ ಈಗಾಗಲೇ ಘೋಷಿಸಿದ್ದು, ಈಗಾಗಲೇ ಬ್ಯಾಂಕ್ನ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪ್ರಕರಣವನ್ನು ತ್ವರಿತವಾಗಿ ಸಿಬಿಐ ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆಹಚ್ಚುವ ಮೂಲಕ ರಾಜ್ಯದ ಪರಿಶಿಷ್ಟ ಪಂಗಡಗಳ ಜನರಿಗೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.