ಹಾಸನ, ಜೂ 01(DaijiworldNews/AA): ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್ಡ್ರೈವ್ ಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಹಾಸನದ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ಆದೇಶ ಹೊರಡಿಸಿದೆ.
ಆರೋಪಿಗಳಾದ ನವೀನ್ ಗೌಡ ಹಾಗೂ ಚೇತನ್ನ ಕಸ್ಟಡಿ ಅವಧಿ ಮುಕ್ತಾಯ ಹಿನ್ನೆಲೆ ಇಂದು ಎಸ್ಐಟಿ ಅಧಿಕಾರಿಗಳು ಅವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಲಯ ಆರೋಪಿಗಳಿಬ್ಬರಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಇದೇ ಮೇ 30 ರಂದು ಪೆನ್ಡ್ರೈವ್ ಹಂಚಿಕೆ ಪ್ರಕರಣದ ಇಬ್ಬರು ಆರೋಪಿಗಳಾದ ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್ ಗೌಡ ಹಾಗೂ ಪ್ರೀತಂಗೌಡ ಕಛೇರಿ ಸಹಾಯಕ ಚೇತನ್ ಅವರಿಗೆ ದೇಶ ಬಿಟ್ಟು ಹೋಗಬಾರದು. ವಾರಕ್ಕೆ ಒಮ್ಮೆ ತನಿಖಾಧಿಕಾರಿ ಎದುರು ಹಾಜರಾಗಬೇಕು ಎಂಬ ಷರತ್ತಿನ ಮೇರೆಗೆ ಹಾಸನ ಜೈಲಿನಿಂದ ಬಿಡುಗಡೆ ಮಾಡಿ ಹಾಸನದ 3 ನೇ ಅದಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿತ್ತು.