ಮಧ್ಯಪ್ರದೇಶ, ಜೂ. 02(DaijiworldNews/AA): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣವಾಗುವುದು ಕಷ್ಟಸಾಧ್ಯವಾಗಿದೆ. ಹೀಗೆ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಟೀನಾ ದಾಬಿ ಅವರ ಯಶೋಗಾಥೆ ಇದು.
ಟೀನಾ ದಾಬಿ ಅವರು ನವೆಂಬರ್ 9, 1993 ರಂದು ಮಧ್ಯಪ್ರದೇಶದ ಭೋಪಾಲ್ನಲ್ಲಿ ಜನಿಸಿದರು. ಆಕೆಯ ತಂದೆ ಜಸ್ವಂತ್ ದಾಬಿ ಅವರು ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಆಕೆಯ ತಾಯಿ ಹಿಮಾನಿ ದಾಬಿ ಐಇಎಸ್ ಅಂದರೆ ಭಾರತೀಯ ಇಂಜಿನಿಯರಿಂಗ್ ಸೇವೆಯಲ್ಲಿ ಅಧಿಕಾರಿಯಾಗಿದ್ದಾರೆ. ಆಕೆಯ ತಂಗಿ ರಿಯಾ ದಾಬಿ ಕೂಡ ಯುಪಿಎಸ್ಸಿ ಪರೀಕ್ಷೆಯಲ್ಲಿ 15ನೇ ರ್ಯಾಂಕ್ ಪಡೆದುಕೊಂಡು ಐಎಎಸ್ ಅಧಿಕಾರಿಯಾಗಿದ್ದಾರೆ.
ಭೋಪಾಲ್ ನಗರಕ್ಕೆ ಸ್ಥಳಾಂತರಗೊಂಡ ನಂತರ, ಟೀನಾ ದಾಬಿ ನವದೆಹಲಿಯ ಜೀಸಸ್ ಮತ್ತು ಮೇರಿ ಕಾನ್ವೆಂಟ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಾರೆ. ಆಕೆ 12 ನೇ ತರಗತಿಯಲ್ಲಿ ಅಗ್ರಸ್ಥಾನ ಪಡೆದಿರುತ್ತಾರೆ. 12 ನೇ ತರಗತಿ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಗಳಲ್ಲಿ ಅವರು ರಾಜ್ಯಶಾಸ್ತ್ರ ಮತ್ತು ಇತಿಹಾಸದಲ್ಲಿ 100 ರಲ್ಲಿ 100 ಅಂಕಗಳನ್ನು ಗಳಿಸುತ್ತಾರೆ. ಬಳಿಕ ಟೀನಾ ದಾಬಿ ದೆಹಲಿ ವಿಶ್ವವಿದ್ಯಾಲಯದ ಲೇಡಿ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್ನಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ಟೀನಾ ದಾಬಿಯ ತಾಯಿ ಹಿಮಾಲಿ ದಾಬಿ ಸ್ವತಃ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದರು. ಹೀಗಾಗಿ ಅವರು ಟೀನಾ ದಾಬಿ ಅವರಿಗೆ ಐಎಎಸ್ ಅಧಿಕಾರಿಯಾಗಲು ಬೆಂಬಲಿಸುವ ಉದ್ದೇಶದಿಂದ ಸ್ವಯಂ ನಿವೃತ್ತಿ ಪಡೆಯುತ್ತಾರೆ. ಟೀನಾ ಅವರು ತನ್ನ ಪದವಿಯ ಮೊದಲ ವರ್ಷದಲ್ಲಿ ಯುಪಿಎಸ್ಸಿಗೆ ತಯಾರಿ ಆರಂಭಿಸಿದಳು. ಆಕೆ ತನ್ನ ಮೊದಲ ಪ್ರಯತ್ನದಲ್ಲಿಯೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ.
2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಟೀನಾ ದಾಬಿ, ಅವರು ಭಾರತದ ಐಎಎಸ್ ಅಧಿಕಾರಿಗಳಲ್ಲಿ ಪ್ರಮುಖರಾಗಿದ್ದಾರೆ. ಈ ಹಿಂದೆ ಜೈಸಲ್ಮೇರ್ನ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ ಅವರು, ರಾಜಸ್ಥಾನದ ಜೈಪುರದಲ್ಲಿ ಕಮಿಷನರ್ ಇಜಿಎಸ್ ಆಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಇನ್ನು ಟೀನಾ ದಾಬಿ ಜುಲೈ 2023 ರಿಂದ ಹೆರಿಗೆ ರಜೆಯಲ್ಲಿದ್ದರು. ಮತ್ತು ಇತ್ತೀಚೆಗೆ ತಮ್ಮ ಮಗ ಹುಟ್ಟಿದ ಬಳಿಕ ಕರ್ತವ್ಯಕ್ಕೆ ಮರಳಿದ್ದಾರೆ.