ಬೆಂಗಳೂರು, ಜೂ. 02(DaijiworldNews/AA): ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಪ್ರಜ್ವಲ್ ರೇವಣ್ಣ ಅವರು ವಿಶೇಷ ತನಿಖಾ ದಳದ (ಎಸ್ಐಟಿ) ವಿಚಾರಣೆಗೆ ಅಸಹಕಾರ ತೋರುತ್ತಿದ್ದು, ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಿಐಡಿ ಕೆಂದ್ರ ಕಚೇರಿಯಲ್ಲಿನ ಸೆಲ್ನಲ್ಲಿ ಪ್ರಜ್ವಲ್ ಅವರನ್ನು ಎಸ್ಐಟಿ ತೀವ್ರವಾಗಿ ವಿಚಾರಣೆ ನಡೆಸುತ್ತಿದೆ. ವಿಚಾರಣೆ ವೇಳೆ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ಅವರು ನಿರಾಕರಿಸುತ್ತಿದ್ದಾರೆ. ಜೊತೆಗೆ ಹೊರಗೆ ಬಂದ ಕೂಡಲೇ ನೋಡಿಕೊಳ್ಳುವುದಾಗಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆಂದು ಎನ್ನಲಾಗಿದೆ.
ವಿಚಾರಣೆ ವೇಳೆ ಪ್ರಜ್ವಲ್ ಅವರು, ನನ್ನ ವಿರುದ್ಧ ರಾಜಕೀಯ ಪಿತೂರಿಯಿಂದ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ನಾನು ಯಾವುದೇ ತಪ್ಪು ಮಾಡಿಲ್ಲ. 4 ವರ್ಷಗಳ ಬಳಿಕ ಅತ್ಯಾಚಾರ ದೂರು ನೀಡಲು ಹಿಂದಿರುವ ಕಾರಣ ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಪ್ರಜ್ವಲ್ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಮನೆಯಲ್ಲಿ ಹಲವು ಮಂದಿ ಕೆಲಸ ಮಾಡುತ್ತಿದ್ದರು. ನನಗೆ ಆ ಕೆಲಸಗಾರರ ಬಗ್ಗೆ ಮಾಹಿತಿ ಗೊತ್ತಿಲ್ಲ. ತಿರುಚಿದ ವಿಡಿಯೊಗಳನ್ನು ಹರಿಬಿಟ್ಟು ತೇಜೋವಧೆ ಮಾಡಿದ್ದಾರೆ. ಈ ವಿಡಿಯೋಗಳ ಹಿಂದಿರುವ ಕಾರ್ತಿಕ್ ಸೇರಿದಂತೆ ಇತರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಸತ್ಯಾಂಶ ಹೊರಬರಲಿದೆ ಎಂದು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಜ್ವಲ್ ಅವರನ್ನು ಜೂನ್ 6 ರವರೆಗೆ ವಿಚಾರಣೆ ನಡೆಸುವ ಸಲುವಾಗಿ ಎಸ್ಐಟಿ ವಶಕ್ಕೆ ಪಡೆದಿದೆ. ಇನ್ನು ಮೊದಲ ದಿನದ ವಿಚಾರಣೆಗೆ ನಿರೀಕ್ಷಿತ ರೀತಿಯಲ್ಲಿ ಅವರು ಸಹಕರಿಸಿಲ್ಲ. ಎರಡು ದಿನಗಳ ವಿಚಾರಣೆ ಬಳಿಕ ಅವರನ್ನು ಘಟನಾ ಸ್ಥಳಗಳ ಮಹಜರು ಸಲುವಾಗಿ ಹಾಸನಕ್ಕೆ ಕರೆದೊಯ್ಯುಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.