ಲಕ್ನೋ, ಜೂ. 03(DaijiworldNews/AA): ಕಳ್ಳತನ ಮಾಡಲು ಮನೆಗೆ ನುಗ್ಗಿದ ಕಳ್ಳನೊಬ್ಬ ಸೆಕೆಯಿಂದ ಎಸಿ ಕೆಳಗೆ ಮಲಗಿ ನಿದ್ರೆಗೆ ಜಾರಿದ ಘಟನೆ ಭಾನುವಾರ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಲಕ್ನೋದ ಇಂದಿರಾನಗರದಲ್ಲಿದ್ದ ಖಾಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳ ಪಾತ್ರೆ ಹಾಗೂ ಇತರೆ ವಸ್ತುಗಳನ್ನು ತೆಗೆದುಕೊಂಡು ಚೀಲಕ್ಕೆ ತುಂಬಿಸಿಕೊಂಡಿದ್ದಾನೆ. ಮದ್ಯ ಸೇವಿಸಿದ್ದ ಈತ ಮನೆಯಲ್ಲಿ ಎಸಿ ಆನ್ ಇರುವುದನ್ನು ಗಮನಿಸಿದ್ದಾನೆ. ಬಳಿಕ ಎಸಿಯ ತಣ್ಣನೆಯ ಗಾಳಿಗೆ ಸ್ವಲ್ಪ ವಿಶ್ರಾಂತಿ ಮಾಡಲೆಂದು ಮಲಗಿದ್ದಾನೆ. ಈ ವೇಳೆ ಆತ ನಿದ್ರೆಗೆ ಜಾರಿದ್ದಾನೆ.
ಮನೆಯ ಗೇಟ್ ತೆರೆದಿರುವುದನ್ನು ಕಂಡ ಅಕ್ಕಪಕ್ಕದವರು ಮನೆ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮನೆಗೆ ಬಂದು ಆತನ ಎದುರಿಗೆ ಬಂದು ಕುಳಿತರೂ ಕಳ್ಳನಿಗೆ ಎಚ್ಚರವಿರಲ್ಲ. ಬಳಿಕ ಪೊಲೀಸರು ಕಳ್ಳನನ್ನು ಎಬ್ಬಿಸಿ ವಿಚಾರಿಸಿದಾಗ ಕಳ್ಳತನ ಮಾಡಲೆಂದು ಬಂದಿರುವುದಾಗಿ ತಿಳಿಸಿದ್ದಾನೆ. ಹೆಚ್ಚಿನ ತನಿಖೆಗಾಗಿ ಆತನನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.
ಬಂಧಿತನನ್ನು ಕಪಿಲ್ ಎಂದು ಗುರುತಿಸಲಾಗಿದ್ದು, ಆತ ಚೀಲದಲ್ಲಿ ತುಂಬಿಸಿಟ್ಟಿದ್ದ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಪಿಲ್ ವಿರುದ್ಧ ಈಗಾಗಲೇ 6 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಆತ ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಕಳ್ಳತನ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ.