ಅಝಂಗಡ, ಮೇ 09 (Daijiworld News/MSP): ನರೇಂದ್ರ ಮೋದಿ ಹಾಗೂ ಅವರ ಅನುಯಾಯಿ ಯೋಗಿ ಆದಿತ್ಯನಾಥ್ ಈ ಇಬ್ಬರನ್ನು ಕುರ್ಚಿಯಿಂದ ಕೆಳಕ್ಕೆ ಇಳಿಸುವವರೆಗೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ಬಿಎಸ್ಪಿ ಅಧಿನಾಯಕಿ ಮಾಯಾವತಿ ಗುಡುಗಿದ್ದಾರೆ.
ಮೋದಿ ಮತ್ತು ಯೋಗಿಯನ್ನು ಅಧಿಕಾರದಿಂದ ಇಳಿಸುವುದೇ ನಮ್ಮ ಗುರಿ. ಹೀಗಾಗಿ ಅಲ್ಲಿಯವರೆಗೆ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್ಪಿ ಮುಖಂಡ ಅಖಿಲೇಶ್ ಯಾದವ್ ಅವರು ಸ್ಪರ್ಧಿಸಿರುವ ಅಝಂಗಡದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಯಾವತಿ, ಬಿಜೆಪಿ ನಮ್ಮ ಮೈತ್ರಿ ಮುರಿಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ. ಆದರೆ ನಿಮ್ಮ ಪ್ರಯತ್ನ ವ್ಯರ್ಥವಾಗಿರುತ್ತದೆ ಎಂದು ಹೇಳಲು ಇಷ್ಟಪಡುತ್ತೇನೆ. ನಮ್ಮ ಮೈತ್ರಿ ಸುಧೀರ್ಘ ಹಾದಿಯಲ್ಲಿ ಸಾಗಬೇಕಾಗಿದೆ. ನಾವು ಮೈತ್ರಿಕೂಟ ರಚಿಸಿದ್ದು ಕೇವಲ ಮೋದಿಯನ್ನು ವಿರೋಧಿಸಲು ಅಲ್ಲ. ಮೋದಿ ಹಾಗೂ ಅವರ ಅನುಯಾಯಿ ಯೋಗಿ ಆದಿತ್ಯನಾಥ್ ಕುರ್ಚಿಯಿಂದ ಇಳಿಯುವವರೆಗೆ ನಮ್ಮ ಪ್ರಯತ್ನ ಮುಂದುವರಿಯುತ್ತದೆ. ಯೋಗಿ ಆದಿತ್ಯನಾಥ್ ಅವರನ್ನು ಮರಳಿ ಮಠಕ್ಕೆ ಕಳುಹಿಸುವವರೆಗೆ ನಮ್ಮ ಮೈತ್ರಿಗೆ ಏನೂ ಆಗುವುದಿಲ್ಲ ಎಂದರು.