ಬೆಂಗಳೂರು, ಜೂ. 03(DaijiworldNews/AK): ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದ ಆರೋಪದ ಮೇಲೆ ತೆಲಗು ನಟಿ ಹೇಮಾಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ಹೇಮಾ ರಿಪೋರ್ಟ್ ಪಾಸಿಟೀವ್ ಬಂದಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಅವರು ಅನಾರೋಗ್ಯದ ನೆಪ ಹೇಳಿ ವಿಚಾರಣೆಗೆ ಹಾಜರಾಗದೇ ಸಮಯಾವಕಾಶ ಕೇಳಿದ್ದರು. ಹಾಜರಾಗದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು 2ನೇ ನೋಟಿಸ್ ಕೂಡ ನೀಡಿದ್ದರು.
ಇಂದು ಸಂಜೆ 4 ಗಂಟೆಗೆ ಬೆಂಗಳೂರಿಗೆ ಆಗಮಿಸಿರುವ ಅವರು ಬುರ್ಖಾ ತೊಟ್ಟು ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ಈ ವೇಳೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ಮೆಡಿಕಲ್ ಟೆಸ್ಟ್ಗಾಗಿ ಪೊಲೀಸರು ಕರೆದೊಯ್ದಿದ್ದಾರೆ. ಮಂಗಳವಾರ ಬೆಳಗ್ಗೆ ಆನೇಕಲ್ನಲ್ಲಿರುವ ನ್ಯಾಯಾಲಯದ ಮುಂದೆ ನಟಿಯನ್ನು ಹಾಜರುಪಡಿಸಲಿದ್ದಾರೆ.