ಮೈಸೂರು,ಮೇ09((DaijiworldNews/AZM):ದೇಶಕ್ಕಾಗಿ ರಾಜೀವ್ ಗಾಂಧಿ ತನ್ನ ಪ್ರಾಣವನ್ನೇ ಅರ್ಪಿಸಿದ್ದಾರೆ. ಅಂತಹವರ ತ್ಯಾಗದ ಬಗ್ಗೆ ಮೋದಿ ಮಾತನಾಡಬೇಕಿತ್ತು. ಆದ್ರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದೋ ಸರಿಯಲ್ಲ. ರಾಜೀವ್ ಗಾಂಧಿ ಬಗ್ಗೆ ಮೋದಿಯವರು ಈ ರೀತಿ ಮಾತನಾಡಿದ್ದು ನನಗೆ ಸರಿ ಅನ್ನಿಸಿಲ್ಲ ಎಂದು ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಅವರು ಪ್ರಧಾನಿ ಮೋದಿ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ, ನಂಬರ್ ಒನ್ ಭ್ರಷ್ಟಾಚಾರಿ, ಭ್ರಷ್ಟಾಚಾರದ ಕರಿ ನೆರಳಲ್ಲೇ ಸಾವನ್ನಪ್ಪಿದ್ರು ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರ್ಯಾಲಿ ವೇಳೆ ವಾಗ್ದಾಳಿ ನಡೆಸಿದ್ರು. ಈ ಹೇಳಿಕೆಯು ಕೆಲವು ಬಿಜೆಪಿ ನಾಯಕರಿಗೂ ಅಸಮಧಾನ ತಂದೊಡ್ಡಿದ್ದು, ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಅವರು ಪ್ರಧಾನಿ ಮೋದಿ ಹೇಳಿಕೆಯನ್ನು ಬಹಿರಂಗವಾಗಿ ಟೀಕಿಸಿದ್ದಾರೆ.
ಮೈಸೂರಿನಲ್ಲಿ ಈ ಕುರಿತು ಮಾತನಾಡಿದ ಬಿಜೆಪಿ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್, ರಾಜೀವ್ ಗಾಂಧಿ ಭ್ರಷ್ಟಾಚಾರಿ ಎಂಬ ಮೋದಿ ಹೇಳಿಕೆ ಬಗ್ಗೆ ನನ್ನ ವಿರೋಧ ಇದೆ ಎಂದಿದ್ದಾರೆ. ರಾಜೀವ್ಗಾಂಧಿ ಎಂದೂ ಸಹ ಭ್ರಷ್ಟಾಚಾರ ಮಾಡಿದವರಲ್ಲ. ಭ್ರಷ್ಟಾಚಾರ ಆರೋಪ ಬಂದಾಗ ರಾಜಕೀಯ ಬಿಟ್ಟು ಎಲ್ಲಾದ್ರೂ ಹೋಗ್ತಿನಿ ಎಂದಿದ್ರು. ಅಂಥವರ ಬಗ್ಗೆ ದೆಹಲಿ ಹೈಕೋರ್ಟ್ ಸಹ ಆರೋಪ ಮುಕ್ತ ಮಾಡಿದೆ. ಅಂತವರ ಬಗ್ಗೆ ಮೋದಿ ಲಖ್ನೋದಲ್ಲಿ ಮಾತನಾಡಿರೋದು ಸರಿಯಲ್ಲ. ಆ ರೀತಿಯ ಮಾತು ಮೋದಿ ಬಾಯಿಂದ ಬರಬಾರದಿತ್ತು. ರಾಜೀವ್ ಗಾಂಧಿ ರಾಜಕೀಯಕ್ಕೆ ಬಂದಾಗಲೇ ಶುದ್ದ ಹಸ್ತರು ಅಂತ ಸಾಬೀತು ಮಾಡಿದ್ದಾರೆ. ನಾನು ಹಣ ಮಾಡಲು ಅಧಿಕಾರಕ್ಕೆ ಬಂದಿಲ್ಲ ಅಂತ ನೇರವಾಗಿ ಹೇಳಿದ್ದರು.
ಜನರು ನಮ್ಮ ಕುಟುಂಬದ ಬಗ್ಗೆ ಇಟ್ಟ ಗೌರವಕ್ಕಾಗಿ ಬಂದಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದರು.ಅಂತಹ ರಾಜೀವ್ ಗಾಂಧಿ ಬಗ್ಗೆ ಅಟಲ್ ಬಿಹಾರಿ ವಾಜಪೇಯಿಯವರೇ ಒಳ್ಳೆ ಮಾತು ಆಡಿದ್ದಾರೆ. ಈಗ ಮೋದಿ ಆ ರೀತಿಯ ಮಾತನಾಡಿದ್ದು ನನಗೂ ಬೇಸರವಾಯಿತು ಎಂದು ಅವರು ಬಹಿರಂಗವಾಗಿ ಮಾತನಾಡಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮೀಸ್ಟರ್ ಕ್ಲೀನ್ ಅಂತ ಹೆಸರು ಪಡೆದಿದ್ದವರು. ಅವರನ್ನ ನಾನು ತುಂಬಾ ಹತ್ತಿರದಿಂದ ಬಲ್ಲೆ. ಅವರ ರಾಜಕೀಯ ಒಂದು ಉದಾಹರಣೆಯಾಗಿದೆ. ಅಂಥವರ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.