ನವದೆಹಲಿ,ಮೇ 09 (Daijiworld News/MSP): ಭಯೋತ್ಪಾದನೆಯನ್ನು ನಿರಂತರವಾಗಿ ಪೋಷಿಸುತ್ತಾ ಬಂದಿರುವ ಪಾಕಿಸ್ತಾನ ಭಯೋತ್ಪಾದನೆ ಕುರಿತು ತನ್ನ ನಿಲುವನ್ನು ಬದಲಾಯಿಸದಿದ್ದರೆ ಭಾರತ ಈ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.
ನೀವು ಭಯೋತ್ಪಾದನೆಗೆ ಪ್ರಚೋದನೆ ಕೊಡುವುದು ನಿಲ್ಲಿಸದಿದ್ದರೆ ನಿಮಗೆ ಭಾರತದಿಂದ ಹರಿದುಹೋಗಲಿರುವ ನೀರನ್ನು ನಿಲ್ಲಿಸದೆ ನಮಗೆ ಬೇರೆ ಮಾರ್ಗವಿಲ್ಲ ಎಂದು ಗುಡುಗಿದ್ದಾರೆ.
ಈ ನಿಟ್ಟಿನಲ್ಲಿ ಆಂತರಿಕ ಅಧ್ಯಯನ ಆರಂಭ ಮಾಡಲಾಗಿದೆ. ಪಾಕಿಸ್ತಾನಕ್ಕೆ ಹೋಗುವ ನೀರನ್ನು ಹರಿಯಾಣ, ಪಂಜಾಬ್ ಹಾಗೂ ರಾಜಸ್ತಾನಕ್ಕೆ ಹೋಗುವಂತೆ ಮಾಡಲಾಗುವುದು . ಭಾರತದ ಮೂರು ನದಿಗಳಿಂದ ಪಾಕಿಸ್ತಾನಕ್ಕೆ ನೀರು ಹೋಗುತ್ತಿದೆ. ಆ ನೀರನ್ನು ತಡೆಗಟ್ಟಿಲ್ಲ. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ನೀರು ಒಪ್ಪಂದ ಆಧಾರದ ಮೇಲಿನ ಶಾಂತಿಯುತ ಸಂಬಂಧ ಹಾಗೂ ಸಹಕಾರ ಸಂಪೂರ್ಣ ಹಾಳಾಗಿದೆ. ಆದ್ದರಿಂದ ಈ ಒಪ್ಪಂದವನ್ನು ಅನುಸರಿಸಲು ನಾವು ಬದ್ಧರಾಗಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
1960ರಲ್ಲಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಆಯೂಬ್ ಖಾನ್ ನಡುವೆ ಇಂಡಸ್ ವಾಟರ್ ಒಪ್ಪಂದ ನಡೆದಿತ್ತು. ಇದರ ಅನುಸಾರ ಮೂರು ನದಿಗಳ ನೀರು ಪಾಕಿಸ್ತಾನಕ್ಕೆ ಲಭಿಸಿತ್ತು. ಭಾರತದ ಭಾಗದ ನೀರು 33 ದಶಲಕ್ಷ ಎಂ.ಎಫ್. ಅದರಲ್ಲಿ 31ಎಂಎಫ್ ದಶಲಕ್ಷ ನಾವು ಬಳಸುತ್ತಿದ್ದೇವೆ. ಇದೀಗ ಅವುಗಳನ್ನೂ ಬಳಸಿಕೊಳ್ಳಲಾಗುವುದು. ಇಂಡಸ್ ವಾಟರ್ ಒಪ್ಪಂದ ರದ್ದು ಪಡಿಸುವ ಕುರಿತು ವಿಚಾರಕ್ಕೆ ಪ್ರತಿಕ್ರಿಯಿಸಿ ಎರಡೂ ದೇಶಗಳ ನಡುವೆ ಸೌಹಾರ್ದ-ಪ್ರೀತಿ ಬೆಳೆಯಲಿ ಎಂಬ ಕಾರಣಕ್ಕೆ ಒಪ್ಪಂದ ನಡೆದಿತ್ತು. ಆದರೆ ಇಂದು ಪಾಕಿಸ್ತಾನ ಭಯೋತ್ಪಾದಕರನ್ನು ಭಾರತಕ್ಕೆ ಕಳುಹಿಸಿ ಶಾಂತಿ ಕದಡುತ್ತಿದೆ. ಹೀಗಿರುವಾಗ ನಮಗೆ ನೀರನ್ನು ನಿಲ್ಲಿಸದೆ ನಮಗೆ ಬೇರೆ ಮಾರ್ಗವಿಲ್ಲ ಎಂದಿದ್ದಾರೆ.