ಪಶ್ಚಿಮ ಬಂಗಾಲ,ಮೇ09(DaijiworldNews/AZM):ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೀದಿ ಸೋಲುವ ಭೀತಿಯಲ್ಲಿ ತನ್ನ ವಿರುದ್ಧ ಹತಾಶೆಯ ಮಾತುಗಳನ್ನು ಆಡುತ್ತಿದ್ದು, ಆ ಮೂಲಕ ಅವರು ಸಂವಿಧಾನವನ್ನು ಅವಮಾನಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದಾರೆ.
'ಮೋದಿ ದೇಶದ ಪ್ರಧಾನಿ ಎಂಬುದನ್ನು ನಾನು ಒಪ್ಪುವುದಿಲ್ಲ' ಎಂದು ಮಮತಾ ಬ್ಯಾನರ್ಜಿ ಬಹಿರಂಗವಾಗಿ ಹೇಳಿದ್ದು, ಈ ಕುರಿತು ಬಂಕುರಾದಲ್ಲಿ ಇಂದು ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಪ್ರತಿಕ್ರಯಿಸಿದ್ದಾರೆ.'ತಾನು ದೇಶದ ಪ್ರಧಾನಿ ಎಂಬುದನ್ನು ದೀದಿ ಒಪ್ಪುತ್ತಿಲ್ಲ' ಆದರೆ ಅವರು ಪಾಕ್ ಪ್ರಧಾನಿಯನ್ನು ಆ ದೇಶದ ಪ್ರಧಾನಿ ಎಂಬುದನ್ನು ಒಪ್ಪುತ್ತಾರೆ' ಎಂದು ಹೇಳಿದರು.
ಇನ್ನು ಕೆಲ ದಿನಗಳ ಹಿಂದೆ ಫೋನಿ ಚಂಡಮಾರುತದ ಬಗ್ಗೆ ಚರ್ಚಿಸಲು ಪ್ರಧಾನಿ ಮೋದಿ ಅವರು ಮಮತಾ ಬ್ಯಾನರ್ಜಿ ಅವರಿಗೆ ಫೋನ್ ಕರೆ ಮಾಡಿದ್ದರು; ಆದರೆ ಅದಕ್ಕೆ ಅವರು ಉತ್ತರಿಸಿರಲಿಲ್ಲ. ಚಂಡಮಾರುತದ ವೇಳೆ ಮಮತಾ ನನ್ನ ಫೋನ್ ಕರೆಗಳನ್ನು ಸ್ವೀಕರಿಸಲೇ ಇಲ್ಲ; ಕೇಂದ್ರ ಸರಕಾರ ರಾಜ್ಯ ಸರಕಾರದ ಅಧಿಕಾರಿಗಳೊಂದಿಗೆ ಕುಳಿತು ಪರಿಸ್ಥಿತಿಯನ್ನು ಚರ್ಚಿಸಲು, ನೆರವಾಗಲು ಬಯಸಿತ್ತು; ಆದರೆ ದೀದಿ ಅದಕ್ಕೆ ಅವಕಾಶವನ್ನೇ ಮಾಡಿಕೊಡಲಿಲ್ಲ' ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ.
ದೀದಿ ಕಪ್ಪಾಳ ಮೋಕ್ಷ ನನಗೆ ಆಶೀರ್ವಾದ
ಮೇ 7 ರಂದು ಪುರುಲಿಯಾದಲ್ಲೇ ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಅವರು, "ನಾನು ನರೇಂದ್ರ ಮೋದಿ ಅವರನ್ನು ಪ್ರಧಾನಿ ಎಂದು ಪರಿಗಣಿಸಿಲ್ಲ. ನಾನು ವೇತನವನ್ನಾಗಲೀ, ಪೆನ್ಷನ್ ಆಗಲಿ ತೆಗೆದುಕೊಳ್ಳುತ್ತಿಲ್ಲ. ನಾನು ಪುಸ್ತಕ ಬರೆಯುತ್ತೇನೆ, ಅವು ಉತ್ತಮವಾಗಿ ಮಾರಾಟವಾಗುತ್ತವೆ. ನಾನು ನನ್ನ ಪೇಂಟಿಂಗ್ ಗಳಿಗೂ ಹಣ ತೆಗೆದುಕೊಳ್ಳುವುದಿಲ್ಲ. ನಾನು ಸಾವಿರ ಕೋಟಿ ರೂ.ನಷ್ಟು ದುಡ್ಡು ಮಾಡಬಹುದು. ಆದರೆ ನನಗೆ ಹಣ ಬೇಕಿಲ್ಲ. ನಾನು ನನ್ನ ಪಕ್ಷವನ್ನೂ ಹಾಗೇ ನಡೆಸುತ್ತಿದ್ದೇನೆ. ಆದ್ದರಿಂದ ನರೇಂದ್ರ ಮೋದಿ ಬಂಗಾಳಕ್ಕೆ ಬಂದು ನನ್ನ ಪಕ್ಷ ಹಣವನ್ನು ಹೊಡೆಯುತ್ತದೆ ಎಂದಾಗ ಅವರಿಗೆ ಭ್ರಷ್ಟಾಚಾರದ ಕಪಾಳಮೋಕ್ಷ ಮಾಡಬೇಕು ಅನ್ನಿಸುತ್ತದೆ" ಎಂದಿದ್ದರು.
ಇದಕ್ಕೆ ಪಶ್ಚಿಮ ಬಂಗಾಳದ ಪುರುಲಿಯಾ ಎಂಬಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಮೋದಿ,"ದೀದಿ ನನಗೆ ಕಪಾಳಮೋಕ್ಷ ಮಾಡಬೇಕೆಂದಿದ್ದಾರೆ ಎಂದು ನನಗೆ ಯಾರೋ ಹೇಳಿದರು. ದೀದಿ.. ಓಹ್ ದೀದಿ... ನಾನು ನಿಮ್ಮನ್ನು ದೀದಿ ಎಂದೇ ಕರೆಯುತ್ತೇನೆ. ನಾನು ನಿಮ್ಮನ್ನು ಗೌರವಿಸುತ್ತೇನೆ. ನಿಮ್ಮ ಕಪಾಳಮೋಕ್ಷ ನನಗೆ ಆಶೀರ್ವಾದ" ಎಂದು ಮೋದಿ ಹೇಳಿದ್ದಾರೆ.