ಕೋಲ್ಕತ್ತಾ, ಮೇ 09(Daijiworld News/SM): ತನ್ನ ಪಕ್ಷದ ಎಲ್ಲಾ ಅಭ್ಯರ್ಥಿಗಳನ್ನು ಸ್ಪರ್ಧೆಯಿಂದ ಹಿಂದಕ್ಕೆ ಪಡೆಯಲು ನಾನು ಸಿದ್ಧನಿದ್ದೇನೆ. ಆದರೆ, ಪ್ರಧಾನಿಗಳು ತಮ್ಮ ಹೇಳಿಕೆಯನ್ನು ಸಾಬೀತು ಪಡಿಸಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಪಶ್ಚಿಮ ಬಂಗಾಳದ ಬಂಕುರದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರಿಗೆ ಬಹಿರಂಗವಾಗಿ ಸವಾಲೆಸೆದರು. "ಪಶ್ಚಿಮ ಬಂಗಾಳದ 42 ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಟಿಎಂಸಿ ಅಭ್ಯರ್ಥಿಗಳನ್ನು ನಾನು ಸ್ಪರ್ಧೆಯಿಂದ ಹಿಂಪಡೆಯುತ್ತೇನೆ. ಆದರೆ ಅದಕ್ಕೂ ಮುನ್ನ ನನ್ನ ಮೇಲೆ ನೀವು ಮಾಡಿರುವ ಆರೋಪಗಳನ್ನೆಲ್ಲ ಸತ್ಯ ಎಂದು ಸಾಬೀತು ಪಡಿಸಿಬೇಕು" ಎಂದು ಹೇಳಿದ್ದಾರೆ.
"ಕಲ್ಲಿದ್ದಲು ಹಗರಣದಲ್ಲಿ ನಮ್ಮ ಹೆಸರಿದೆ ಎಂದ ನೀವು, ನನ್ನ ವಿರುದ್ಧದ ಆರೋಪವನ್ನು ಸಾಬೀತುಪಡಿಸಿ. ನಿಮ್ಮ ಆರೋಪ ಸತ್ಯವಾದಲ್ಲಿ ನಾನು ಎಲ್ಲಾ ಅಭ್ಯರ್ಥಿಗಳನ್ನು ಹಿಂಪಡೆಯಲು ಸಿದ್ಧನಿದ್ದೇನೆ. ಒಂದೊಮ್ಮೆ ನೀವು ನೀಡಿದ ಹೇಳಿಕೆ ಸುಳ್ಳು ಎಂದು ಆದಲ್ಲಿ, ನೀವು ಸಾರ್ವಜನಿಕರ ಮುಂದೆ ನೂರು ಬಾರಿ ಬಸ್ಕಿ ಹೊಡೆಯಬೇಕು" ಎಂದು ಬ್ಯಾನರ್ಜಿ ಸವಾಲೆಸೆದಿದ್ದಾರೆ.