ಹೊಸದಿಲ್ಲಿ, ಮೇ09(Daijiworld News/SS): ನನ್ನ ಮೇಲಿನ ಆರೋಪವನ್ನು ಸಾಬೀತುಪಡಿಸಿದರೆ ಹಾಗೂ ನಾನು ಆ ಕೆಲಸವನ್ನು ಮಾಡಿದ್ದೀನಿ ಎನ್ನುವುದಾದರೆ ನಾನು ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ. ಇಲ್ಲದಿದ್ದರೆ, ನೀವು ರಾಜಕೀಯ ತೊರೆಯುತ್ತೀರಾ...? ಎಂದು ಗಂಭೀರ್ ಆಪ್ ಮುಖ್ಯಸ್ಥ ಕೇಜ್ರಿವಾಲ್ಗೆ ಪ್ರಶ್ನೆ ಮಾಡಿದ್ದಾರೆ.
ಪೂರ್ವ ದಿಲ್ಲಿಯ ಬಿಜೆಪಿ ಲೋಕಸಭೆ ಅಭ್ಯರ್ಥಿ ಗೌತಮ್ ಗಂಭೀರ್ ವಿರುದ್ಧ ಎಎಪಿ ಗಂಭೀರ ಆರೋಪವನ್ನು ಮಾಡಿದೆ. ತಮ್ಮ ರಾಜಕೀಯ ವಿರೋಧಿ ಅತೀಷಿ ವಿರುದ್ಧ ಅಶ್ಲೀಲ ಮತ್ತು ಅವಹೇಳನಕಾರಿ ಅಂಶಗಳನ್ನೊಳಗೊಂಡ ಕರಪತ್ರಗಳನ್ನು ಗೌತಮ್ ಗಂಭೀರ್ ಹಂಚಿದ್ದಾರೆ ಎಂದು ಆರೋಪಿಸಿದೆ. ಆದರೆ, ತಮ್ಮ ಮೇಲಿನ ಆರೋಪವನ್ನು ಗಂಭೀರ್ ತಳ್ಳಿಹಾಕಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಲೋಕಸಭೆ ಅಭ್ಯರ್ಥಿ ಗೌತಮ್ ಗಂಭೀರ್, ಒಬ್ಬರು ಮಹಿಳೆಯ ಹಾಗೂ ತಮ್ಮದೇ ಪಕ್ಷದ ಸಹೋದ್ಯೋಗಿಯ ಘನತೆಗೆ ಧಕ್ಕೆ ತಂದಿದ್ದೀರಾ ಎಂದು ಆಪ್ ಮುಖ್ಯಸ್ಥ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅರವಿಂದ್ ಕೇಜ್ರಿವಾಲ್ರಂತಹ ಮುಖ್ಯಮಂತ್ರಿ ಇರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಚುನಾವಣೆ ಗೆಲ್ಲಲು ಇಷ್ಟೆಲ್ಲ ಮಾಡುತ್ತೀರಾ ಎಂದು ಸಹ ಗಂಭೀರ್ ಮತ್ತೊಂದು ಟ್ವೀಟ್ನಲ್ಲಿ ವಾಗ್ದಾಳಿ ಮಾಡಿದ್ದಾರೆ.