ಬೆಂಗಳೂರು, ಮೇ09(Daijiworld News/SS): ಚಿಕಿತ್ಸೆ ಫಲಿಸದೆ ಬೀದಿ ನಾಯಿಯೊಂದು ಸತ್ತ ಹಿನ್ನಲೆ ಎನ್ಜಿಓ ಮತ್ತು ಡಾಕ್ಟರ್ ವಿರುದ್ಧ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವೈದ್ಯರು ಮಾಡಿರುವ ತಪ್ಪಿನಿಂದ ಜೂಲಿ ಹೆಸರಿನ ಬೀದಿ ನಾಯಿ ಮೃತಪಟ್ಟಿದೆ ಎಂದು ಸ್ಥಳೀಯರು ಬೈಯಪ್ಪನಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಂತಾನಹರಣ ಚಿಕಿತ್ಸೆ ಮಾಡುವುದಾಗಿ ನಾಯಿಯನ್ನು ಎನ್ಜಿಒ ಸಿಬ್ಬಂದಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಚಿಕಿತ್ಸೆಯ ನಂತರ ನಾಯಿಯನ್ನು ಬೀದಿಯಲ್ಲಿಯೇ ಬಿಟ್ಟು ಹೋಗಿದ್ದರು. ಬಳಿಕ ಕೆಲವೇ ದಿನಗಳಲ್ಲಿ ನಾಯಿ ಮೃತಪಟ್ಟಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಷ್ಮಾ ಎಂಟರ್ ಪ್ರೈಸಸ್ ಎಂಬ ಹೆಸರಿನ ಎನ್ಜಿಒ ನಾಯಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡಿಲ್ಲ ಮತ್ತು ವೈದ್ಯರು ಶಸ್ತ್ರ ಚಿಕಿತ್ಸೆ ಸರಿಯಾಗಿ ಮಾಡಿಲ್ಲ ಎಂದು ಸಂಸ್ಥೆಯ ಅರುಣಾ ರೆಡ್ಡಿ ಮತ್ತು ವೈದ್ಯರ ವಿರುದ್ಧ ಸ್ಥಳೀಯ ನವೇನ್ ಕಾಮತ್ ದೂರು ನೀಡಿದ್ದಾರೆ.