ಪ್ರತಾಪ್ ಗಢ್, ಮೇ09(Daijiworld News/SS): ಮೋದಿಯಂತಹ ದುರ್ಬಲ ಹಾಗೂ ಹೇಡಿ ಪ್ರಧಾನಿಯನ್ನು ನಾನೆಂದೂ ನೋಡಿಲ್ಲ ಎಂದು ಕಾಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತದ ಅವಧಿಯಲ್ಲಿ ಈಡೇರಿಸದ ಭರವಸೆಗಳ ಬಗ್ಗೆ ಜನರು ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ ಹೇಳಲು ಸಹ ಮೋದಿಗೆ ಆಗುತ್ತಿಲ್ಲ. ರಾಜಕೀಯ ಶಕ್ತಿಯು ದೊಡ್ಡ ಪ್ರರ್ಚಾರ ಸಭೆಗಳಿಂದಲೋ ಟಿ.ವಿ. ಶೋಗಳಿಂದಲೋ ಬರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ದೊಡ್ಡವರು ಎಂದು ಹೇಳಿದರು.
ಯಾರೇ ಆದರೂ ಜನರ ಸಮಸ್ಯೆ ಕೇಳಿಸಿಕೊಂಡು, ಪರಿಹರಿಸಬೇಕು. ವಿಪಕ್ಷಗಳನ್ನು ಕೇಳಿಸಿಕೊಳ್ಳುವ ಶಕ್ತಿ ಪ್ರಧಾನಿಗೆ ಇರಬೇಕಿತ್ತು. ನಿಮ್ಮನ್ನು ಕೇಳಿಸಿಕೊಳ್ಳುವುದು ಪಕ್ಕಕ್ಕಿರಲಿ, ನಿಮಗೆ ಹೇಗೆ ಪ್ರತಿಕ್ರಿಯಿಸಬೇಕು ಅನ್ನೋದು ಈ ಪ್ರಧಾನಿಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ಭ್ರಷ್ಟಾಚಾರ ನಿಯಂತ್ರಿಸುವ ಭರವಸೆ ನೀಡಿ ಜನರನ್ನು ವಂಚನೆ ಮಾಡಿದರು. ಆದರೆ ಈಗ ಅವರೇ ಭ್ರಷ್ಟಾಚಾರಿ ಎಂಬುದು ಬಯಲಾಗಿದೆ. ತಮ್ಮ ಪ್ರಚಾರದ ಮೂಲಕ ವಾಸ್ತವವನ್ನು ಅವರು ಮರೆಮಾಚುತ್ತಾರೆ. ನಿಮ್ಮ ಬಳಿ ಬಂದಾಗ ಮೋದಿಗೆ ಹೇಳಿ, ಅಮೇಥಿಯಲ್ಲೇ ವಿದ್ಯುತ್ ಸಂಪರ್ಕವೇ ಇಲ್ಲದೆ ಮಹಿಳೆಯೊಬ್ಬರಿಗೆ ಮೂವತ್ತೈದು ಸಾವಿರ ವಿದ್ಯುತ್ ಬಿಲ್ ಬಂದಿದೆ. ಮತ್ತೊಬ್ಬರಿಗೆ ಐವತ್ತು ಸಾವಿರ ಬಂದಿದೆ ಎಂದು ಹೇಳಿದರು.
ದೊಡ್ಡ ಉದ್ಯಮಿಗಳ ಸಾಲ ಮನ್ನಾ ಆಯಿತು. ಆದರೆ ರೈತರ ಸಾಲ ಮನ್ನಾಕ್ಕೆ ರಾಹುಲ್ ಕೇಳಿದರೆ, ಅದಕ್ಕೆ ದುಡ್ಡಿಲ್ಲ ಎನ್ನುತ್ತಾರೆ. ಪ್ರಧಾನಿ ಅಷ್ಟೊಂದು ಪ್ರಭಾವಿ ಆಗಿದ್ದರೆ, ಅವರಿಗೇಕೆ ನಿಮ್ಮ ಸಮಸ್ಯೆ ತೀರಿಸಲು ಅಗುತ್ತಿಲ್ಲ ಅನ್ನೋದನ್ನು ತಿಳಿಸಲಿ. ಪ್ರತಿ ಭಾಷಣದಲ್ಲೂ ಪಾಕಿಸ್ತಾನ ಎನ್ನುತ್ತಾರೆ. ಇನ್ನೈದು ವರ್ಷದಲ್ಲಿ ಅವರ ಸರಕಾರ ಏನು ಮಾಡುತ್ತದೆ, ಈಗ ಏನು ಮಾಡಿದೆ ಅನ್ನೋದು ಹೇಳಲಿ ಎಂದು ಸವಾಲು ಹಾಕಿದರು.