ನವದೆಹಲಿ, ಮೇ 09 (Daijiworld News/MSP): ಮಧ್ಯಸ್ಥಿಕೆ, ರಾಜಿ ಸಂಧಾನದ ಮೂಲಕ ಅಯೋಧ್ಯೆಯ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿಯಲು ನೇಮಿಸಿದ್ದ ಸಮಿತಿಯ ವರದಿ ಏನಾಗಿದೆ? ಎನ್ನುವ ಪ್ರಶ್ನೆಗೆ ಇಂದು ಉತ್ತರ ದೊರೆಯಲಿದೆ. ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ಅತಿ ಸೂಕ್ಷ್ಮವಾಗಿರುವ ಅಯೋಧ್ಯೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮೂರು ಮಂದಿಯ ಮಧ್ಯಸ್ಥಿಕೆ ಸಮಿತಿಯನ್ನು ರಚಿಸಿತ್ತು. ಇದರ ಅವಧಿ ಮೇ 3ಕ್ಕೆ ಕೊನೆಗೊಂಡಿದೆ. ಹೀಗಾಗಿ ಮೇ 10 ರ ಶುಕ್ರವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯಲಿರುವ ಮಹತ್ವದ ವಿಚಾರಣೆ ವೇಳೆ ಎಲ್ಲಾ ಪ್ರಶ್ನೆಗೂ ಉತ್ತರ ದೊರಕಲಿದೆ.
ಮಾರ್ಚ್ 8ರಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಪೀಠವು ಆದೇಶವನ್ನು ನೀಡಿ ಸಂಧಾನಕ್ಕಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಖಲೀಫುಲ್ಲಾ ಅಧ್ಯಕ್ಷತೆಯಲ್ಲಿ ತ್ರಿಸದಸ್ಯ ‘ಸಂಧಾನ ತಂಡ’ವನ್ನು ರಚಿಸಿತು. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಹಾಗೂ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಖಲೀಫುಲ್ಲಾ, ಅವರನ್ನು ಸಂಧಾನ ತಂಡದ ಇತರ ಸದಸ್ಯರಾಗಿ ಪೀಠವು ನೇಮಕ ಮಾಡಿ ಫೈಜಾಬಾದಿನಲ್ಲಿ ಒಂದು ವಾರದ ಒಳಗಾಗಿ ಸಂಧಾನ ಪ್ರಕ್ರಿಯೆ ಆರಂಭವಾಗಬೇಕು ಮತ್ತು ಉತ್ತರ ಪ್ರದೇಶ ರಾಜ್ಯವು ಸಂಧಾನಕ್ಕೆ ಬೇಕಾದ ಅಗತ್ಯಗಳನ್ನು ಒದಗಿಸಬೇಕು. ಸಂಧಾನ ತಂಡವು 8 ವಾರಗಳಲ್ಲಿ ತನ್ನ ವರದಿಯನ್ನು ಕೊಡಬೇಕು ಎಂದು ಪೀಠವು ಆಜ್ಞಾಪಿಸಿತು.
ಸಂಧಾನ ಪ್ರಕ್ರಿಯೆ ವಿಚಾರದಲ್ಲಿ ಸಂಪೂರ್ಣ ಗೌಪ್ಯತೆ ಕಾಪಾಡುವಂತೆ ಪೀಠವು ಉಭಯ ಪಕ್ಷಗಳಿಗೂ ತಾಕೀತು ಮಾಡಿತು. ಸಂಧಾನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕ್ಯಾಮರಾದಲ್ಲಿ ಚಿತ್ರೀಕರಿಸಲಾಗುವುದು. ಸಂಧಾನ ಪ್ರಕ್ರಿಯೆಯ ಯಾವುದೇ ಅಂಶವೂ ಮುದ್ರಣ ಮಾಧ್ಯಮದಲ್ಲಾಗಲೀ, ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾಧ್ಯಮದಲ್ಲಾಗಲೀ ವರದಿಯಾಗಬಾರದು ಎಂದೂ ಪೀಠ ನಿರ್ದೇಶಿಸಿತು.
ಈ ಅವಧಿ ಮೇ 3ಕ್ಕೆ ಅಂತ್ಯಗೊಂಡಿದ್ದು, ಅದರ ವರದಿಯನ್ನು ಗುರುವಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದೆ. ಸಂಧಾನ ಪ್ರಕ್ರಿಯೆಯ ವಿವರವನ್ನು ಮಾಧ್ಯಮಗಳಿಗೆ ನೀಡಬಾರದು, ಸಂಪೂರ್ಣ ಗುಪ್ತವಾಗಿರಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಹೀಗಾಗಿ, ವರದಿಯಲ್ಲಿ ಏನಿರಬಹುದು ಎಂಬ ಕುತೂಹಲ ದೇಶಾದ್ಯಂತ ಇದೆ.