ನವದೆಹಲಿ, ಮೇ 10 (Daijiworld News/MSP): ಭಾರತದ ಯುದ್ಧನೌಕೆಯಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕುಟುಂಬದ ಜತೆ ವಿಹಾರಯಾನ ಕೈಗೊಂಡಿದ್ದರು ಎಂಬ ಆರೋಪಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ,ಮಾಜಿ ಸಂಸದೆ ರಮ್ಯಾ, ’ಐಎನ್ಎಸ್ ಸುಮಿತ್ರಾ ’ದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿರುವ ಫೋಟೊ ಪೋಸ್ಟ್ ಮಾಡಿ ಕಾಳೆಲೆದಿದ್ದಾರೆ.
ಫೋಟೊ ದ ಅಡಿಬರಹವಾಗಿ "ಮೋದಿಯವರೆ ನೀವು ನಿಮ್ಮೊಂದಿಗೆ ಕೆನಡಾ ದೇಶದ ಪೌರತ್ವ ಹೊಂದಿರುವ ನಟ ಅಕ್ಷಯ್ ಕುಮಾರ್ ಹಾಗೂ ಕುಟುಂಬದವರೊಂದಿಗೆ ನೌಕಾದಳದ ಐಎನ್ಎಸ್ ಸುಮಿತ್ರಾದಲ್ಲಿ 2016ರಲ್ಲಿ ತೆರಳಿದ್ದು, ಈ ಸಮಯದಲ್ಲಿ ಎದ್ದಿದ್ದ ವಿವಾದವನ್ನು ಬಹುತೇಕ ನಾವ್ಯಾರೂ ಇನ್ನೂ ಕೂಡಾ ಮರೆತಿಲ್ಲ " ಎಂದು ಅಡಿಬರಹ ಬರೆದು ಪ್ರಧಾನಿ ಮೋದಿ ಹಾಗೂ ನಟ ಅಕ್ಷಯ್ ಕುಮಾರ್ ಗೆ ಟ್ಯಾಗ್ ಮಾಡಿದ್ದಾರೆ.
ಬುಧವಾರ ದೆಹಲಿಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, "ರಾಹುಲ್ ಗಾಂಧಿಯವರ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂದಿಯವರು ಐಎನ್ಎಸ್ ವಿರಾಟ್ ಯುದ್ಧನೌಕೆ ಕುಟುಂಬದ ಪ್ರವಾಸದ ವಾಹನವಾಗಿತ್ತು" ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತ್ಯುತ್ತರವಾಗಿ ಕಾಂಗ್ರೆಸ್, ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಭಾರತೀಯ ವಾಯುಪಡೆಯ ವಿಮಾನಗಳನ್ನು ತಮ್ಮ ಸ್ವಂತ ಟ್ಯಾಕ್ಸಿಯಂತೆ ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.