ಬೆಂಗಳೂರು, ಮೇ 10 (Daijiworld News/MSP): ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೆಂಪಲ್ ರನ್ ನ ಬಳಿಕ ಇದೀಗ ಅವರು ರೆಸಾರ್ಟ್ ರನ್ ಆರಂಭಿಸಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಬಿಜೆಪಿಯ ಅಧಿಕೃತ ಖಾತೆ ’ಕರ್ನಾಟಕ ಬಿಜೆಪಿ ’ಯಲ್ಲಿ ಈ ಬಗ್ಗೆ ಟ್ವೀಟ್ ಮಾಡಿದ್ದು , " ಟೆಂಪಲ್ ರನ್ ನ ಬಳಿಕ ಇದೀಗ ಮುಖ್ಯಮಂತ್ರಿಗಳು ರೆಸಾರ್ಟ್ ರನ್ ಆರಂಭಿಸಿದ್ದಾರೆ. ಉಡುಪಿ ರೆಸಾರ್ಟ್ ನಲ್ಲಿ ಐಷಾರಾಮಿಯಾಗಿ ರಜೆಯ ಮಜ ಪಡೆದು, ಇದೀಗ ಮತ್ತೊಮ್ಮೆ ರೆಸಾರ್ಟ್ ನಲ್ಲಿ ಐಷಾರಾಮಿಯಾಗಿ ಕಾಲಕಳೆಯಲೆಂದು ಕೊಡಗಿಗೆ ಸ್ಥಳಾಂತರಗೊಂಡಿದ್ದಾರೆ".
" ಮುಖ್ಯಮಂತ್ರಿಗಳೇ ಐಷಾರಾಮಿಯಾಗಿ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಾ ಪ್ರಕೃತಿ ಸೌಂದರ್ಯ ಆಸ್ವಾದಿಸುತ್ತಿರುವಾಗ, ಕಳೆದ ವರ್ಷದ ಪ್ರವಾಹ ಸಂತ್ರಸ್ತರು ಇನ್ನು ಮೂಲಸೌಕರ್ಯಗಳಿಲ್ಲದೆ, ಕುಡಿಯಲು ನೀರಿಲ್ಲದೆ ನಿಮ್ಮ ಸರ್ಕಾರದ ಸಹಾಯಕ್ಕಾಗಿ ಕಾಯುತ್ತಿದೆ ಎನ್ನುವುದು ನೆನಪಿರಲಿ" ಎಂದು ಟೀಕಿಸಿದೆ.
ಇತ್ತೀಚೆಗೆ ಉಡುಪಿ ಬಳಿಯ ರೆಸಾರ್ಟ್ನಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ಮರಳಿದ್ದ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತೆ ರೆಸಾರ್ಟ್ನತ್ತ ಮುಖ ಮಾಡಿದ್ದು ಇಂದಿನಿಂದ 2 ದಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.