ಪಶ್ಚಿಮ ಬಂಗಾಳ, ಮೇ 10 (Daijiworld News/MSP): ಪಶ್ಚಿಮ ಬಂಗಾಳದ ಘಟಾಲ್ ಚುನಾವಣೆಗೆ ಇನ್ನೇನು ಕೇವಲ ಎರಡು ದಿನಗಳು ಬಾಕಿ ಇರುವಂತೆಯೇ ಅಲ್ಲಿನ ಪೊಲೀಸರು, ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಅವರ ಕಾರಿನಲ್ಲಿದ್ದ 1.13 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಗುರುವಾರ ರಾತ್ರಿ ವೇಳೆಗೆ ಪಶ್ಚಿಮ ಮಿಡ್ನಾಪುರದ ಪಿಂಗಳ ಪ್ರದೇಶದಲ್ಲಿ ಮಂಗಳಾ ಬಾರ್ ಸಮೀಪ ಭಾರತಿ ಘೋಷ್ ಪ್ರಯಾಣಿಸುತ್ತಿದ್ದಾಗ ಪೊಲೀಸರು ಕಾರನ್ನು ತಡೆದು ನಿಲ್ಲಿಸಿ ಶೋಧ ಕಾರ್ಯ ನಡೆಸಿದಾ ಹಣ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
" ಘೋಷ್ ಕಾರಿನಲ್ಲಿ 1,13,815 ರೂ. ನಗದು ಇತ್ತು. ಕಾರಿನಲ್ಲಿ ಇನ್ನು ಕೆಲವರೂ ಇದ್ದರು. ಇಷ್ಟು ಮೊತ್ತ ಹಣವನ್ನು ಯಾಕಾಗಿ ಒಯ್ಯಲಾಗುತ್ತಿದೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ನೀಡಲು ಘೋಷ್ ವಿಫಲರಾಗಿದ್ದಾರೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮತದಾರ ಮೇಲೆ ಪ್ರಭಾವ ಬೀರಲು ಭಾರತಿ ಘೋಷ್ ಹಣ ಸಾಗಿಸುತ್ತಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ನಿರಾಕರಿಸಿರುವ ಪೋಷ್, ನನ್ನ ಬಳಿ ಕೇವಲ 50000 ಸಾವಿರ ಹಣವಿತ್ತು. ಕಾರಿನಲ್ಲಿ ನನ್ನ ಸಂಚಾಲಕ ಹಾಗೂ ಚಾಲಕನೊಂದಿಗೆ ಪ್ರಯಾಣಿಸುತ್ತಿದ್ದೆ. ನನ್ನ ಸಂಚಾಲಕ 49 ಸಾವಿರ ಹಣ ಹೊಂದಿದ್ದು ನನ್ನ ಚಾಲಕ ಬಳಿ 13 ಸಾವಿರ ರೂಪಾಯಿ ಇತ್ತು.
ವೈಯಕ್ತಿಕ ಖರ್ಚುಗಳಿಗಾಗಿ ನನ್ನೊಂದಿಗೆ ಹಣ ಒಯ್ಯುತ್ತಿದ್ದು ಬಿಟ್ಟರೆ ಮಾಡಿದ ಟಿಎಂಸಿ ಆರೋಪದಲ್ಲಿ ಅರ್ಥವಿಲ್ಲ. ಅಲ್ಲದೆ ನಾನು ಚುನಾವಣಾ ಆಯೋಗದ ಮಾದರಿಯ ನೀತಿ ಸಂಹಿತೆಯ ಯಾವುದೇ ನಿಯಮವನ್ನು ಉಲ್ಲಂಘಿಸಲಿಲ್ಲ" ಎಂದು ಘೋಷ್ ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವಾಗಿ ಚುನಾವಣಾ ಆಯೋಗವೂ ಯಾವುದೇ ದೂರು ಸ್ವೀಕರಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಘೋಷ್ ಅವರು ಘಾಟಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬೆಂಗಾಲಿ ಚಿತ್ರ ತಾರೆ ಮತ್ತು ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ, ದೇವ್ ಎಂದೇ ಜನಪ್ರಿಯರಾಗಿರುವ ದೀಪಕ್ ಅಧಿಕಾರಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.