ಕಲಬುರಗಿ, ಮೇ.10(Daijiworld News/SS): ಯಡಿಯೂರಪ್ಪ 3 ದಿನ ಮುಖ್ಯಮಂತ್ರಿಯಾಗಿ ಮಾನ ಮರ್ಯಾದೆಯನ್ನು ಕಳೆದುಕೊಂಡಿರುವ ಒಬ್ಬ ಮಹಾನ್ ಸುಳ್ಳುಗಾರ ಎಂದು ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಕಾಂಗ್ರೆಸ್ ಪಕ್ಷದ 20 ಶಾಸಕರಿಗೆ ಅಸಮಾಧಾನವಿದೆ. ಉಪಚುನಾವಣೆ ಫಲಿತಾಂಶ ಬಳಿಕ ಬಿಜೆಪಿಯ ಸಂಖ್ಯಾಬಲ 109 ಆಗಲಿದ್ದು, ಬಿಜೆಪಿ ಅಧಿಕಾರಕ್ಕೆ ಬರುವಂತಹ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕೆಂಬ ಅಧಿಕಾರದ ಲಾಲಸೆ ಹೊಂದಿದ್ದಾರೆ. ಶಾಸಕರ ಸಂಖ್ಯಾಬಲವನ್ನು ಹೊಂದಿದರಷ್ಟೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಹೇಳಿದರು.
ಶಾಸಕರ ಖರೀದಿ ಮೂಲಕ ಮತ್ತೆ ಮುಖ್ಯಮಂತ್ರಿಯಾಗಬೇಕೆನ್ನುವ ಅಧಿಕಾರದ ದಾಹ ಯಡಿಯೂರಪ್ಪಗೆ ಹೆಚ್ಚಾಗಿದೆ. ಶಾಸಕರನ್ನು ಖರೀದಿ ಮಾಡುವಷ್ಟು ಹಣ ಯಡಿಯೂರಪ್ಪ ಅವರಿಗೆ ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.
ಎಲ್ಲಾ ಪಕ್ಷಗಳಲ್ಲಿಯೂ ಅಸಮಾಧಾನವಿರುವವರು ಇರುತ್ತಾರೆ. ಅಂದ ಮಾತ್ರಕ್ಕೆ ಅಸಮಾಧಾನಿತರನ್ನು ದುಡ್ಡು ಕೊಟ್ಟು ಖರೀದಿಸಲು ಸಾಧ್ಯವೇ..? ಕಾಂಗ್ರೆಸ್ನಲ್ಲಿ ಅತೃಪ್ತರು ಯಾರೂ ಇಲ್ಲ. ನಿಜವಾದ ಅತೃಪ್ತರು ಇರುವುದು ಬಿಜೆಪಿಯಲ್ಲಿ. ಉಮೇಶ್ ಜಾಧವ್ ಅವರನ್ನು ಖರೀದಿಸಲು ಬಿಜೆಪಿಗೆ ಹಣ ಎಲ್ಲಿಂದ ಬಂತು..? ಎಂದು ಕೇಳಿದರು.