ಹುಬ್ಬಳ್ಳಿ,ಮೇ11(DaijiworldNews/AZM):ಬಿಜೆಪಿ ಮುಖಂಡರೊಬ್ಬರಿಗೆ ಸಚಿವ ಡಿ.ಕೆ.ಶಿವಕುಮಾರ್ ಅವರು 5 ಲಕ್ಷ ರೂ. ಆಮಿಷ ಒಡ್ಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಈ ಕುರಿತು ಕುಂದಗೋಳ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆ ಸಂಶಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು, ಸಚಿವರು ನನಗೆ ಆಮಿಷ ಒಡ್ಡಿದ್ದಾರೆ ಎಂದು ನಮ್ಮ ಪಕ್ಷದ ಮುಖಂಡರು ನನ್ನ ಬಳಿ ಹೇಳಿಕೊಂಡಿದ್ದಾರೆ. ಆದರೆ ನಾವು ಖರೀದಿಗೆ ಇಲ್ಲ ಎಂದು ಸಚಿವರಿಗೆ ಕುಂದಗೋಲ ಕ್ಷೇತ್ರದ ಜನರು ತಿರುಗೇಟುಕೊಟ್ಟಿದ್ದಾರೆ ಎಂದರು.
ಸಚಿವರು ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಶಿವಮೊಗ್ಗಕ್ಕೆ ಹೋಗಿದ್ದರು. ಭದ್ರಾವತಿಯಲ್ಲಿ ಹಣ ಹಂಚಲು ಮುಂದಾಗಿದ್ದರು. ಆದರೆ ಕಾರಿನ ಟೈಯರ್ ನಲ್ಲಿ 2 ಕೋಟಿ ರೂ. ಸಿಕ್ಕಿಬಿತ್ತು. ಈ ಹಿಂದೆ ನಂಜನಗೂಡು ಉಪಚುನಾವಣೆ ಪ್ರಚಾರಕ್ಕೆ ಹೋಗಿದ್ದರು. ಆಗಲೂ ಲಾರಿಯಲ್ಲಿ ಹಣ ಸಾಗಿಸುವ ಪ್ರಯತ್ನ ಮಾಡಿ ಸಿಕ್ಕಿಬಿದ್ದಿದ್ದರು. ಈ ಮೂಲಕ ಅಕ್ರಮವಾಗಿ ಚುನಾವಣೆ ಗೆಲ್ಲಲು ಸಚಿವರು ಮುಂದಾಗುತ್ತಿದ್ದಾರೆ ಎಂದು ಅವರು ಆರೋಪಿಸಿದರು.