ಚೆನ್ನೈ,ಮೇ11(DaijiworldNews/AZM): ನಮಕ್ಕಲ್ ಮಕ್ಕಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 30 ಶಿಶುಗಳ ಮಾರಾಟವಾಗಿದೆ ಎಂದು ತಮಿಳುನಾಡು ಸಿಬಿ-ಸಿಐಡಿ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮಾರಾಟವಾಗಿರುವ 30 ಮಕ್ಕಳಲ್ಲಿ 24 ಹೆಣ್ಣು ಶಿಶುಗಳಾಗಿವೆ. ಈ ದಂಧೆಯ ಪ್ರಮುಖ ಆರೋಪಿಗಳಲ್ಲೊಬ್ಬಳಾದ ಶಾಂತಿ ಎಂಬಾಕೆಯನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಸಿಬಿ-ಸಿಐಡಿ ಹೇಳಿದೆ.
ಪ್ರಕರಣದಲ್ಲಿ ಮಧ್ಯವರ್ತಿಗಳಾಗಿದ್ದವರನ್ನಷ್ಟೇ ಅಲ್ಲದೆ ಮಕ್ಕಳ ತಂದೆತಾಯಿ ಮತ್ತು ಕೊಂಡಕೊಂಡವರನ್ನು ಸಹ ತನಿಖೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಈವರೆಗೆ ಅಮುಧವಲ್ಲಿ ಎಂಬ ಮಹಿಳೆ, ಆಂಬುಲೆನ್ಸ್ ಚಾಲಕ ಮುರುಗೇಶನ್ , ಮಧ್ಯವರ್ತಿಗಳಾದ ಪ್ರವೀಣ್, ಹಸೀನಾ, ಅರುಳ್ಸಾಮಿ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಅರುಳ್ಸ್ವಾಮಿ ತಪ್ಪೊಪ್ಪಿಗೆ ಮೇರೆಗೆ ಆತನ ಮನೆಯಿಂದ 1 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ.
ನವಜಾತ ಶಿಶುಗಳ ಮಾರಾಟದಲ್ಲಿ ನನಗೆ 30 ವರ್ಷಗಳ ಅನುಭವವಿದೆ ಎಂದು ಮಹಿಳೆಯೊಬ್ಬರು ಹೇಳಿರುವ ಆಡಿಯೋವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಕಳೆದ 30 ವರ್ಷಗಳಿಂದ ನವಜಾತ ಶಿಶುವನ್ನು ಮಾರಾಟ ಮಾಡುತ್ತಿದ್ದೆ ಮತ್ತು ಈ ಕೆಲಸದಲ್ಲಿ ನನಗೆ ಎಂದಿಗೂ ಸಮಸ್ಯೆಯಾಗಿಲ್ಲ . ನವಜಾತ ಹೆಣ್ಣು ಶಿಶುಗಳನ್ನು 2.75ಲಕ್ಷಕ್ಕೆ ಮಾರುತ್ತಿದ್ದೆ. ಮಕ್ಕಳು ಬೆಳ್ಳಗೆ, ನೋಡಲು ಸುಂದರವಾಗಿದ್ದರೆ ಬೆಲೆ ಹೆಚ್ಚಿರುತ್ತಿತ್ತು. ಅಂತಹ ಮಗುವಿಗೆ 3.75 ಲಕ್ಷದಿಂದ 4 ಲಕ್ಷದವರೆಗೆ ಪಡೆಯಲಾಗುತ್ತಿತ್ತು ಎಂದು ಆಕೆ ಹೇಳಿರುವುದು ಆಡಿಯೋದಲ್ಲಿ ಸ್ಪಷ್ಟವಾಗಿತ್ತು.
ಆಡಿಯೋ ಅಧಿಕೃತವೇ ತನಿಖೆ ನಡೆಸಿದ ಬಳಿಕ ಪೊಲೀಸರು ತನಿಖೆಯನ್ನು ಆರಂಭಿಸಿದ್ದರು. ಆಡಿಯೋ ನಿವೃತ್ತ ನರ್ಸ್ನದ್ದು ಎಂದು ತಿಳಿದು ಬಂದಿದ್ದು, 10 ವರ್ಷಗಳ ಹಿಂದೆಯೇ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡಿದ್ದಳು. ಆಸ್ಪತ್ರೆಯ ಸಿಬ್ಬಂದಿ ಕೂಡ ಈ ದಂಧೆಯಲ್ಲಿ ಆಕೆಗೆ ಸಹಕಾರ ನೀಡುತ್ತಿದ್ದರು ಎಂದು ತನಿಖೆಯಲ್ಲಿ ವ್ಯಕ್ತವಾಗಿದೆ..