ತುಮಕೂರು,ಮೇ11(DaijiworldNews/AZM): ಆಕಸ್ಮಿಕ ಬೆಂಕಿಗೆ ಖಾಸಗಿ ಬಸ್ ಸುಟ್ಟು ಕರಕಲಾದ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದ್ದು, ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ಶುಕ್ರವಾರ ಸಂಜೆ 6:15ಕ್ಕೆ ಎಸ್ಆರ್ಎಸ್ ಬಸ್ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯಿಂದ ಬೆಂಗಳೂರಿಗೆ ಬರುತಿತ್ತು. ಈ ವೇಳೆಯಲ್ಲಿ ತುಮಕೂರಿನಲ್ಲಿ ಆಕಸ್ಮಿಕವಾಗಿ ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಮುದ್ದೆಬಿಹಾಳ ಮೂಲದ ಪ್ರಯಾಣಿಕರೊಬ್ಬರು ಬಸ್ಸಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ನಿದ್ದೆಯಲ್ಲಿದ್ದ ಉಳಿದ ಪ್ರಯಾಣಿಕರನ್ನು ಎಬ್ಬಿಸಿ ಕೆಳಗಿಳಿಸಿದ್ದಾರೆ. ಇದರಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳದವರು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ರಭಸಕ್ಕೆ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಈ ಬಸ್ಸಿನಲ್ಲಿದ್ದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಅವಘಡದಿಂದ ಪಾರಾಗಿದ್ದಾರೆ.