ರಾಯಚೂರು, ಮೇ 11(DaijiworldNews/AZM): ಎಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಕೊಲ್ಲಲಾಗಿತ್ತು ಎಂಬ ಅನುಮಾನಕ್ಕೆ ಕೊನೆಗೂ ಉತ್ತರ ಸಿಕ್ಕಿದ್ದು, ಆಕೆಯನ್ನು ಅತ್ಯಾಚಾರ ಮಾಡಿಲ್ಲ ಹಾಗೂ ಇದು ಒಂದು ಆತ್ಮಹತ್ಯೆ ಎಂದು ಮರಣೋತ್ತರ ಪರೀಕ್ಷೆಯ ವರದಿ ಹೇಳುತ್ತಿದೆ.
ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ವಿದ್ಯಾರ್ಥಿನಿಯ ಕತ್ತಿನ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದೆ ಬಿಟ್ಟರೆ ದೇಹದ ಮೇಲೆ ಯಾವುದೇ ಗಾಯ ಇಲ್ಲ, ಏಪ್ರಿಲ್ 13ರಂದೇ ಆಕೆ ನೇಣು ಹಾಕಿಕೊಂಡಿರುವ ಸಾಧ್ಯತೆ ಇರುವ ಕಾರಣ ಆಕೆಯ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ವರದಿಯ ಪ್ರಕಾರ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರವಾದ ಕುರುಹುಗಳೂ ಇಲ್ಲ.
ಇನ್ನು ವಿದ್ಯಾರ್ಥಿನಿಯ ದೇಹ ಕಪ್ಪು ಬಣ್ಣಕ್ಕೆ ತಿರುಗಿದ್ದು,ಅನುಮಾನಕ್ಕೆ ಕಾರಣವಾಗಿತ್ತು, ಆದರೆ ಈ ಕುರಿತು ಮಾಹಿತಿ ನೀಡಿರುವ ಸಿಐಡಿ ಅಧಿಕಾರಿ, ಆತ್ಮಹತ್ಯೆ ಮಾಡಿಕೊಂಡ ಎರಡೇ ದಿನದಲ್ಲಿ ದೇಹ ಕೊಳೆಯುತ್ತದೆ, ಕಪ್ಪು ಬಣ್ಣಕ್ಕೆ ತಿರುಗುತ್ತದೆ, ಈ ಪ್ರಕರಣದಲ್ಲಿ ನಾಪತ್ತೆ ಆದ ಮೂರನೇ ದಿನಕ್ಕೆ ದೇಹ ಸಿಕ್ಕಿದೆ, ಬಿಸಿಲು ಹಾಗೂ ಕೊಳೆತ ಕಾರಣ ದೇಹ ಕಪ್ಪು ಬಣ್ಣಕ್ಕೆ ತಿರುಗಿದೆ, ಯಾರೂ ದೇಹವನ್ನು ಸುಟ್ಟಿಲ್ಲ ಎಂದಿದ್ದಾರೆ.
ಆದರೆ ಆಕೆ ನಾಪತ್ತೆಯಾದ ದಿನದಂದು ಕಾಲೇಜಿನ ಬಳಿ ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಸುದರ್ಶನ್ ಸಿಕ್ಕಿ, ಅಂದೂ ಸಹ ಪ್ರೀತಿಸುವಂತೆ ಬಲವಂತಪಡಿಸಿದ್ದ ಮತ್ತು ಆಕೆಯ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದೆ. ಅಂದು ಮಾತ್ರವಲ್ಲದೆ ಅದಕ್ಕೆ ಮುನ್ನವೂ ವಿದ್ಯಾರ್ಥಿನಿಯನ್ನು ಸಾರ್ವಜನಿಕವಾಗಿ ನಿಂದಿಸಿದ್ದ ಮತ್ತು ಹಲ್ಲೆ ಮಾಡಿದ್ದ, ಇದರಿಂದಲೇ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಅನುಮಾನ ವ್ಯಕ್ತವಾಗಿದೆ.
ರಾಯಚೂರಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಅರ್ಧ ಕೊಳೆತ ಶವ ನೇಣು ಬಿಗಿದ ಸ್ಥಿತಿಯಲ್ಲಿ ಏಪ್ರಿಲ್ 16 ರಂದು ಪತ್ತೆಯಾಗಿತ್ತು, ಯಾರೋ ಅತ್ಯಾಚಾರ ಮಾಡಿ, ಕೊಲೆ ಮಾಡಿ ಆಕೆಯ ಶವವನ್ನು ನೇಣು ಹಾಕಿದ್ದಾರೆ ಎಂದು ನಂಬಲಾಗಿತ್ತು.