ಭೋಪಾಲ್,ಮೇ 11(DaijiworldNews/AZM):ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು 2002ರಲ್ಲಿಯೇ ಆಗಿನ ಪ್ರಧಾನಿ ವಾಜಪೇಯಿಯವರು ಪದಚ್ಯುತಿಗೊಳಿಸಲು ಬಯಸಿದ್ದರು ಎಂದು ಮಾಜಿ ಬಿಜೆಪಿ ನಾಯಕರೇ ಹೇಳಿದ್ದಾರೆ. ಹೌದು ಇಂತಹ ಒಂದು ಬಾಂಬನ್ನು ಸಿಡಿಸಿರುವುದು ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ.
ಭೋಪಾಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು,2002 ರಲ್ಲಿ ನಡೆದ ಕೋಮುವಾದಿ ಗೋಧ್ರಾ ಗಲಭೆ ನಂತರ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪದಚ್ಯುತಿಗೊಳಿಸಲು ಬಯಸಿದ್ದರು ಎಂದು ಹೇಳಿದ್ದಾರೆ.2002 ರಲ್ಲಿ ಗೋವಾ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆಗೆ ಹೋಗುವ ಸಂದರ್ಭದಲ್ಲಿ ಒಂದು ವೇಳೆ ಮೋದಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯಲು ನಿರಾಕರಿಸಿದರೆ ಗುಜರಾತ್ ಸರ್ಕಾರವನ್ನು ವಿಸರ್ಜನೆಗೊಳಿಸುವ ಹಂತಕ್ಕೆ ಬಂದಿದ್ದರು" ಎಂದು ಹೇಳಿದರು.
"ನನ್ನ ಮಾಹಿತಿಯ ಪ್ರಕಾರ, ಆಡ್ವಾಣಿ ಅವರು ಅದನ್ನು ವಿರೋಧಿಸಿದರು ಮತ್ತು ಮೋದಿ ಜೀ ಅವರನ್ನು ವಜಾ ಮಾಡಿದರೆ ಅವರು ಅಡ್ವಾಣಿ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಈ ಹಿನ್ನಲೆಯಲ್ಲಿ ವಾಜಪೇಯಿ ನಿರ್ಧಾರದಿಂದ ಹಿಂದೆ ಸರಿದರು. ಆದ ಕಾರಣ ಮೋದಿ ಸಿಎಂ ಹುದ್ದೆಯಲ್ಲಿ ಮುಂದುವರೆದರು ಎಂದೂ ಇದೇ ಸಂದರ್ಬದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಐಎನ್ಎಸ್ ವಿರಾಟ್ ನನ್ನು ರಾಜೀವ್ ಗಾಂಧಿ ವೈಯಕ್ತಿಕ ಟ್ಯಾಕ್ಸಿಯಾಗಿ ಬಳಸಿಕೊಂಡಿದ್ದರು ಎನ್ನುವ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯಶವಂತ್ ಸಿನ್ಹಾ, ಮಾಜಿ ನೌಕಾ ಅಧಿಕಾರಿಗಳು ಅದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.