ಹುಬ್ಬಳ್ಳಿ, ಮೇ.11(Daijiworld News/SS): ಶಕ್ತಿ ಕೇಂದ್ರಗಳ ಮೂಲಕ ಬಿಜೆಪಿ ಮನೆ ಮನೆಯನ್ನು ತಲುಪಿ, ಜನರ ನಾಡಿ ಮಿಡಿತ ಅರಿಯಲಾಗುತ್ತಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆಲುವು ನಿಶ್ಚಿತ ಎಂದು ಬಿಜೆಪಿಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಗೋಳದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡ್ರ ಗ್ರಾಮ ಅದರಗುಂಚಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಇದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಹಣ ಬಲ ಹಾಗೂ ಬಿಜೆಪಿಯ ಜನ ಬಲದ ನಡುವಿನ ಚುನಾವಣೆ. ಯಾವುದೇ ಕಾರಣಕ್ಕೂ ಚಿಕ್ಕನಗೌಡ್ರ ಜನ ಬಲದ ಮುಂದೆ ಸಚಿವ ಡಿ.ಕೆ. ಶಿವಕುಮಾರ್ ಅವರ ಹಣ ಬಲ ನಡೆಯುವುದಿಲ್ಲ ಎಂದು ತಿಳಿಸಿದರು.
ರಾಜ್ಯದ ಸುಮಾರು 125 ತಾಲ್ಲೂಕುಗಳಲ್ಲಿ ಭೀಕರ ಬರಗಾಲ ಇದೆ. ಆದರೆ ರಾಜ್ಯದಲ್ಲಿ ಬರ ಪರಿಹಾರ ಕಾರ್ಯಕ್ರಮಗಳು ಜಾರಿಯಾಗಿಲ್ಲ. ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್ ಯೋಜನೆ ಜಾರಿಗೆ ತಂದಿಲ್ಲ. ರಾಜ್ಯದ ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.
ಈ ಎಲ್ಲಾ ಬೆಳವಣಿಗಳನ್ನು ಗಮನಿಸುವಾಗ ಮೇ. 23ರ ಚುನಾವಣೆ ಬಳಿಕ, ರಾಜ್ಯದಲ್ಲಿನ ಈ ದರಿದ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.