ನವದೆಹಲಿ, ಮೇ.11(Daijiworld News/SS): ಅಮೆರಿಕ ನಿರ್ಮಾಣದ ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ (ಎಎಚ್-64ಇ(1) ಅನ್ನು ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿದ್ದು, ಇದರಿಂದ ವಾಯುಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ.
ಅಪಾಚೆ ಗಾರ್ಡಿಯನ್ ಹೆಲಿಕಾಪ್ಟರ್ (ಎಎಚ್-64ಇ(1) ಅನ್ನು ಅಮೆರಿಕದ ಆ್ಯರಿಜೋನಾದಲ್ಲಿರುವ ಮೆಸಾ ಬೋಯಿಂಗ್ ವಿಮಾನ ತಯಾರಿಕ ಕೇಂದ್ರದಲ್ಲಿ ಔಪಚಾರಿಕವಾಗಿ ಭಾರತೀಯ ವಾಯುಪಡೆಗೆ ಹಸ್ತಾಂತರಿಸಲಾಗಿದೆ.
2015ರಲ್ಲಿ ಅಮೆರಿಕದೊಂದಿಗೆ ಅಪಾಚೆ ಹೆಲಿಕಾಪ್ಟರ್ ಖರೀದಿಗೆ ಭಾರತ ಒಪ್ಪಂದ ಮಾಡಿಕೊಂಡಿತ್ತು. ಅಮೆರಿಕದಿಂದ 22 ಅಪಾಚೆ ಹೆಲಿಕಾಪ್ಟರ್ಗಳನ್ನು ಭಾರತ ಖರೀದಿ ಮಾಡಲಿದೆ. ಇದಕ್ಕಾಗಿ 13,952 ಕೋಟಿ ವೆಚ್ಚ ಮಾಡಲಾಗುತ್ತಿದೆ. 2020ರ ವೇಳೆಗೆ 22 ಅಪಾಚೆ ಹೆಲಿಕಾಪ್ಟರ್ಗಳು ಭಾರತೀಯ ವಾಯುಪಡೆಯ ಬತ್ತಳಿಕೆ ಸೇರಲಿವೆ.
ಈ ಹೆಲಿಕಾಷ್ಟರ್ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ, ಯುದ್ಧ ಭೂಮಿಯಲ್ಲಿ ಸಂವಹನ ನಡೆಸುವ ಸಾಮರ್ಥ್ಯ, ಗಾಳಿ ಹಾಗೂ ಮಳೆಯ ಒತ್ತಡದ ನಡುವೆಯೂ ಹಾರಾಟ, ಪ್ರಕೃತಿ ವಿಕೋಪದ ಸಂದರ್ಭದಲ್ಲೂ ಬಳಕೆ ಮಾಡುವ ಸಾಮರ್ಥ್ಯ, ಗುಡ್ಡಗಾಡು ಹಾಗೂ ಬೆಟ್ಟ ಪ್ರದೇಶಗಳಲ್ಲೂ ಸುಲಭವಾಗಿ ಇಳಿಯುವ ಸಾಮರ್ಥ್ಯ, ಅಗಸದಲ್ಲಿ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯ ಮತ್ತು ಯುದ್ಧ ಭೂಮಿಯಲ್ಲಿ ಸಂವಹನ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.