ನವದೆಹಲಿ, ಮೇ.11(Daijiworld News/SS): ಭಾರೀ ಬಿಗಿ ಭದ್ರತೆಯೊಂದಿಗೆ ಲೋಕಸಭಾ ಚುನಾವಣೆಯ ಆರನೇ ಹಂತದ ಮತದಾನ ಮೇ.12 ರಂದು ದೇಶದ ಏಳು ರಾಜ್ಯಗಳಲ್ಲಿ 59 ಕ್ಷೇತ್ರಗಳಿಗೆ ನಡೆಯಲಿದೆ.
ಮೇ 12 ರಂದು ಉತ್ತರ ಪ್ರದೇಶದ 14 ಕ್ಷೇತ್ರ, ಹರಿಯಾಣದ 10 ಲೋಕಸಭಾ ಕ್ಷೇತ್ರ, ಪಶ್ಚಿಮ ಬಂಗಾಳ, ಬಿಹಾರ ಮಧ್ಯ ಪ್ರದೇಶದ ಎಂಟು ಕ್ಷೇತ್ರ, ದೆಹಲಿಯ ಏಳು ಮತ್ತು ಜಾರ್ಖಂಡ್ನ ನಾಲ್ಕು ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆ ಮತದಾನ ನಡೆಯಲಿದೆ.
ರಾಜಧಾನಿ ದೆಹಲಿ ಸೇರಿದಂತೆ ಏಳು ರಾಜ್ಯಗಳ 59 ಲೋಕಸಭಾ ಕ್ಷೇತ್ರಗಳಲ್ಲಿ ಶಾಂತಿಯುತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ.
ಮೆ.10ರಂದು ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಪ್ರಮುಖ ಪ್ರಾದೇಶಿಕ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿ ಮತದಾರರನ್ನು ಓಲೈಸುವ ಕಸರತ್ತು ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್, ಶೀಲಾ ದೀಕ್ಷಿತ್, ಅಖಿಲೇಶ್ ಯಾದವ್, ಕೇಂದ್ರ ಸಚಿವರಾದ ಮನೇಕಾ ಗಾಂದಿ, ಡಾ.ಹರ್ಷವರ್ಧನ್, ರಾಧಾ ಮೋಹನ್ ಸಿಂಗ್, ನರೇಂದ್ರ ಸಿಂಗ್ ತೋಮರ್, ಕ್ರೀಡಾಪಟುಗಳಾದ ವೀರೇಂದ್ರ ಸಿಂಗ್, ಗೌತಮ್ ಗಂಭೀರ್ ಸ್ಪರ್ಧಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಆಧ್ಯಕ್ಷ ರಾಹುಲ್ಗಾಂಧಿ, ಬಿಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಬಹು ಜನ ಸಮಾಜ ಪಕ್ಷದ ನಾಯಕಿ ಮಯಾವತಿ, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ತಾರಾ ಪ್ರಚಾರಕರು ಆರನೇ ಹಂತದ ಚುನಾವಣೆಗಾಗಿ ಆಯಾ ರಾಜ್ಯಗಳಲ್ಲಿ ಪ್ರವಾಸ ಮಾಡಿ ಭರ್ಜರಿ ರೋಡ್ಶೋ ಮತ್ತು ರ್ಯಾಲಿಗಳನ್ನು ನಡೆಸಿ ತಮ್ಮ ಪಕ್ಷಗಳ ಪರ ಮತ ಯಾಚಿಸಿದ್ಧಾರೆ.