ಬೆಂಗಳೂರು, ಜೂ 04(DaijiworldNews/ AK): 2024ರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ವಿಶೇಷ ಅಂದ್ರೆ ಕರ್ನಾಟಕದಲ್ಲಿ ಸಚಿವರ ಮಕ್ಕಳೂ ಕೂಡ ಸ್ಪರ್ಧಿಸಿದ್ದು, ಇಂದು ಅವರ ರಾಜಕೀಯ ಭವಿಷ್ಯ ಬಹಿರಂಗಗೊಂಡಿದೆ.
ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಸತತ ಸೋಲುಂಡ ಕಾಂಗ್ರೆಸ್ ಈ ಚುನಾವಣೆಯಲ್ಲಿ ಸಚಿವ ಶಿವಾನಂದ ಪಾಟೀಲ್ ಪುತ್ರಿ, ಹೊಸ ಮುಖ ಸಂಯಕ್ತಾ ಪಾಟೀಲ್ ಅವರನ್ನು ಕಣಕ್ಕಳಿಸಲಾಯಿತು.. ಆದರೆ ಸಂಯುಕ್ತ ಪಾಟೀಲ್ ಅವರಿಗೆ ಸೋಲಾಗಿದೆ.
ಇನ್ನು 2023 ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತಗಳಿಂದ ಸೋತಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿಗೆ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ ಗೆಲುವು ಕೈ ತಪ್ಪಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಕಣದಲ್ಲಿದ್ದರು. ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದು, ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದ್ದಾರೆ.
ಇತ್ತ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣದಲ್ಲಿದ್ದರು. ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಗೆಲುವಿನ ವಿಶ್ವಾಸ ಹೊಂದಿತ್ತು. ಆದರೆ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಸೋಲಾಗಿದೆ.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ 1991ರಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು. ಅಲ್ಲಿಂದ ಬಿಜೆಪಿ ಅಲ್ಲಿ ಹಿಡಿತ ಸಾಧಿಸಿಕೊಂಡಿತು. ಆದರೆ ಈ ಬಾರಿ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಮೂಲಕ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದಾರೆ.