ಮುಂಬೈ,ಮೇ12(DaijiworldNews/AZM):: ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಚಿವರ ದೇಶ–ವಿದೇಶ ಪ್ರವಾಸಗಳಿಗೆ ₹393.58 ಕೋಟಿ ಖರ್ಚಾಗಿದೆ ಎಂದು ಸಂಪುಟ ವ್ಯವಹಾರಗಳ ಖರ್ಚು–ವೆಚ್ಚ ನಿರ್ವಹಣೆ ವಿಭಾಗದ ಹಿರಿಯ ಅಧಿಕಾರಿ ಸತೀಶ್ ಗೋಯಲ್ ಈ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮುಂಬೈನ ಮಾಹಿತಿ ಹಕ್ಕು ಕಾರ್ಯಕರ್ತ ಅನಿಲ್ ಗಲಗಲಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದ ಹಿನ್ನಲೆ ಸಂಪುಟ ವ್ಯವಹಾರಗಳ ಖರ್ಚು–ವೆಚ್ಚ ನಿರ್ವಹಣೆ ವಿಭಾಗ ಈ ಕುರಿತು ಮಾಹಿತಿ ನೀಡಿದೆ. 2018ರ ಡಿಸೆಂಬರ್ನಲ್ಲಿ ರಾಜ್ಯ ಸಭೆಗೆ ಮಾಹಿತಿ ನೀಡಿದ್ದ ಸರ್ಕಾರ, 2014 -2018ರ ಅವಧಿಯಲ್ಲಿ ವಿದೇಶ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ₹2.021 ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಹೇಳಿತ್ತು.
ಇದೀಗ, 2014ರ ಮೇ ನಂತರ ಪ್ರಧಾನಿ ಮತ್ತು ಸಂಪುಟ ಸಹೋದ್ಯೋಗಿಗಳು ವಿದೇಶ ಪ್ರವಾಸಗಳಿಗೆ ₹263 ಕೋಟಿ ಖರ್ಚು ಮಾಡಿದ್ದು, ದೇಶದೊಳಗಿನ ಪ್ರವಾಸಗಳಿಗೆ ₹48 ಕೋಟಿ ಖರ್ಚು ಮಾಡಿದ್ದಾರೆ. ರಾಜ್ಯ ಖಾತೆ ಸಚಿವರು ವಿದೇಶ ಪ್ರವಾಸಕ್ಕೆ ₹29 ಕೋಟಿ ಹಾಗೂ ದೇಶದೊಳಗಿನ ಪ್ರವಾಸಕ್ಕೆ ₹53 ಕೋಟಿ ಖರ್ಚು ಮಾಡಿದ್ದಾರೆ. ಪ್ರಧಾನಿ ಹಾಗೂ ಸಚಿವರ ದೇಶ–ವಿದೇಶ ಪ್ರವಾಸಗಳ ಒಟ್ಟು ಖರ್ಚು ₹393.58 ಕೋಟಿ ಆಗಿದೆ ಎಂದು ಗೋಯಲ್ ತಿಳಿಸಿದ್ದಾರೆ.
2014–15ರಲ್ಲಿ ಮೋದಿ ಹಾಗೂ ಸಚಿವರು ವಿದೇಶ ಪ್ರಯಾಣಕ್ಕೆ ₹88 ಕೋಟಿ ವ್ಯಯಿಸಿದ್ದಾರೆ. ಪ್ರಧಾನಿ ಮತ್ತು ಸಚಿವರ ದೇಶ–ವಿದೇಶ ಭೇಟಿಯ ಖರ್ಚಿನ ವಿವರ ಸುಲಭವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು. ಆದರೆ, ಈ ವಿಚಾರದಲ್ಲಿ ಸರ್ಕಾರ ಪಾರದರ್ಶಕತೆ ಅನುಸರಿಸಿಲ್ಲ ಎಂದು ಗಲಗಲಿ ಆರೋಪಿಸಿದ್ದಾರೆ.