ಮುಂಬೈ, ಜೂ. 05(DaijiworldNews/AA): ಬಿಜೆಪಿ ಪಕ್ಷವು ಸರ್ಕಾರ ರಚನೆ ಮಾಡುವಷ್ಟು ಬಹುಮತ ಪಡೆದಿಲ್ಲ. ಪ್ರಧಾನಿ ಮೋದಿ ನೈತಿಕ ಸೋಲನ್ನು ಒಪ್ಪಿಕೊಳ್ಳಬೇಕು. ಮೋದಿ ಬ್ರ್ಯಾಂಡ್ ಮುಗಿದಿದೆ ಎಂದು ಶಿವಸೇನಾ(ಯುಬಿಟಿ) ಬಣದ ನಾಯಕ ಸಂಜಯ್ ರಾವುತ್ ತಿಳಿಸಿದ್ದಾರೆ.
ಇಂದು ದೆಹಲಿಯಲ್ಲಿ ಸಭೆ ಸೇರಲಿರುವ 'ಇಂಡಿಯಾ' ಬಣದ ನಾಯಕರು, ಮುಂದಿನ ಕಾರ್ಯತಂತ್ರದ ಬಗ್ಗೆ ನಿರ್ಧರಿಸಲಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಪ್ರಧಾನಿಯಾಗಿ ಇಂಡಿಯಾ ಒಕ್ಕೂಟದ ಸರ್ಕಾರವನ್ನು ಮುನ್ನಡೆಸುವುದಾದರೆ ನಾವು ವಿರೋಧಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರು, ಸರ್ವಾಧಿಕಾರಿಗಳ ಜೊತೆ ಮೈತ್ರಿ ಬಗ್ಗೆ ಯೋಚಿಸಬೇಕಿದೆ. ನಿರಂಕುಶಾಧಿಕಾರಿಗಳ ಜೊತೆ ಮೈತ್ರಿ ಮಾಡಿಕೊಳ್ಳುವುದೇ ಅಥವಾ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಕೆಲಸ ಮಾಡುವುದೇ ಎಂಬ ಬಗ್ಗೆ ಚಂದ್ರಬಾಬು ಮತ್ತು ನಿತೀಶ್ ಕುಮಾರ್ ನಿರ್ಧರಿಸಬೇಕಿದೆ. ಸರ್ವಾಧಿಕಾರಿಗಳ ಜೊತೆ ಅವರು ಹೋಗುವುದಿಲ್ಲ ಎಂದು ನಂಬುತ್ತೇನೆ ಎಂದು ಬಿಜೆಪಿಯನ್ನು ಪರೋಕ್ಷವಾಗಿ ಸರ್ವಾಧಿಕಾರಿ ಎಂದು ಅವರು ಕರೆದಿದ್ದಾರೆ.
ಮಂಗಳವಾರ ಹೊರಬಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 240 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ಸ್ಪಷ್ಟಬಹುಮತಕ್ಕೆ 32 ಸ್ಥಾನಗಳ ಅಗತ್ಯವಿದೆ. ಹೀಗಾಗಿ ಬಿಜೆಪಿಯು ಟಿಡಿಪಿ, ಜೆಡಿಯು ಮತ್ತು ಇತರೆ ಪಕ್ಷಗಳ ಬೆಂಬಲ ಪಡೆದರೆ ಎನ್ಡಿಎ ಅಧಿಕಾರಕ್ಕೆ ಬೇಕಾದಷ್ಟು ಸ್ಥಾನವನ್ನು ಗಳಿಸಲಿದೆ.