ಮುಂಬೈ, ಜೂ. 05(DaijiworldNews/AA): ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಶಿಂಧೆ ಬಣಕ್ಕೆ ಸೋಲಾಗಿದ್ದು, ಇದರ ನೈತಿಕ ಹೊಣೆಯನ್ನು ಹೊತ್ತು ಫಡ್ನವಿಸ್ ರಾಜೀನಾಮೆ ಘೋಷಿಸಿದ್ದಾರೆ. ಸರ್ಕಾರದ ಜವಬ್ದಾರಿಯಿಂದ ಬಿಡುಗಡೆಗೊಳಿಸಲು ಹೈಕಮಾಂಡ್ ಬಳಿ ಮನವಿ ಮಾಡಿಕೊಂಡಿರುವ ಅವರು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಇಂಗಿತವನ್ನು ಹೊರಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಶಿಂಧೆ ಬಣ ಸೋತಿದ್ದು, ಮಹಾ ವಿಕಾಸ ಅಘಾಡಿ ಮೈತ್ರಿ ಹೆಚ್ಚು ಸ್ಥಾನವನ್ನು ಗಳಿಸಿದೆ. ಒಟ್ಟು ೪೮ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 13, ಬಿಜೆಪಿ 9, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ 9, ಶರಾದ್ ಪವಾರ್ ನೇತೃತ್ವದ ಎನ್ಸಿಪಿ 8, ಶಿಂಧೆ ನೇತೃತ್ವದ ಶಿವಸೇನೆ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
2019ರಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿತ್ತು. ಈ ಮೈತ್ರಿಯ ಮೂಲಕ 43 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿತ್ತು. ಯುಪಿಎ ಮೈತ್ರಿ ಕೇವಲ 5 ಸ್ಥಾನ ಮಾತ್ರ ಗೆದ್ದುಕೊಂಡಿತ್ತು.