ರಾಮನಗರ,ಜೂ. 05(DaijiworldNews/AK): ರಾಜ್ಯ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಅಸ್ತ್ರವಾಗಿ ಬಳಸಿಕೊಂಡಿತು, ಅದರೆ ಅವು ನಿರೀಕ್ಷಿತ ಫಲಿತಾಂಶ ನೀಡಲಿಲ್ಲ, ಚುನಾವಣಾ ರಾಜಕೀಯಲ್ಲಿ ಹೀಗಾಗುತ್ತದೆ, ಒಂದು ಪಟ್ಟು ಕೈಕೊಟ್ಟಿದೆ ಹಾಗಾಗಿ ಬೇರೆ ಪಟ್ಟಿನ ಬಗ್ಗೆ ಪಕ್ಷದ ಮುಖಂಡರು, ಶಾಸಕಾಂಗ ಪಕ್ಷದ ನಾಯಕರು ಪರಾಮರ್ಶೆ ನಡೆಸಲಿದ್ದಾರೆ ಎಂದು ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ನಮಗೆ ಬೇಕಿಲ್ಲ ಎಂಬ ಸಂದೇಶವನ್ನು ಜನ ನೀಡಿದ್ದಾರೆ, ಹಾಗಾಗಿ ಅವುಗಳನ್ನು ಮುಂದುವರಿಸಬೇಕೋ ಬೇಡ್ವೋ ಅಂತ ತೀರ್ಮಾನ ತೆಗೆದುಕೊಳ್ಳುವಷ್ಟು ದೊಡ್ಡವ ತಾನಲ್ಲ, ಅದನ್ನು ಪಕ್ಷದ ಹಿರಿಯ ನಾಯಕರು ನಿರ್ಧರಿಸುತ್ತಾರೆ ಎಂದರು.
ಸೋಲಿಗೆ ಒಂದು ಸಮುದಾಯವನ್ನು ಹೊಣೆ ಮಾಡೋದು ಸರಿಯಲ್ಲ, ಒಕ್ಕಲಿಗರು ವೋಟು ಹಾಕಿಲ್ಲ ಅಂತ ಹೇಗೆ ಹೇಳುತ್ತೀರಿ, ಅಹಿಂದ ಸಮುದಾಯಗಳು ವೋಟು ಹಾಕದಿರುವ ಸಾಧ್ಯತೆಯೂ ಇರುತ್ತದೆ, ಡಾ ಮಂಜುನಾಥ್ ಕ್ಷೇತ್ರದಲ್ಲ್ಲಿ ಹೊಸಮುಖ ಮತ್ತು ವೈದ್ಯರು, ಅವರಿಂದ ತಮಗೆ ಪ್ರಯೋಜನವಾದೀತು ಅಂತ ಮತದಾರರು ಭಾವಿಸಿರಬಹುದು ಎಂದು ತಿಳಿಸಿದರು.