ಬೆಂಗಳೂರು,ಮೇ12((DaijiworldNews/AZM): ರಾಜ್ಯದಲ್ಲಿ ನೀಟ್ ಪರೀಕ್ಷೆಯಿಂದ ಹಲವು ವಿದ್ಯಾರ್ಥಿಗಳು ವಂಚಿತರಾದ ಹಿನ್ನಲೆ ಮೇ 20ರಂದು ಮರುಪರೀಕ್ಷೆ ಮಾಡಲಾಗುತ್ತಿದೆ.
ಮರುಪರೀಕ್ಷೆಗೆ ಇದುವರೆಗೂ 110 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಮೇ 5 ರಂದು ನಡೆದ ನೀಟ್ ಪರೀಕ್ಷೆಯಲ್ಲಿ ಸುಮಾರು 500 ವಿದ್ಯಾರ್ಥಿಗಳು ವಂಚಿತರಾಗಿದ್ದು, ಇದುವರೆಗೂ 110 ವಿದ್ಯಾರ್ಥಿಗಳು ಮಾತ್ರ ನೋಂದಣಿ ಮಾಡಿಸಿದ್ದಾರೆ.
ನೀಟ್ ಪರೀಕ್ಷೆ ಮೇ 5ರಂದು ನಡೆದಿತ್ತು. ಆದರೆ, ಹಂಪಿ ಎಕ್ಸ್ಪ್ರೆಸ್ ರೈಲು ತಡವಾಗಿ ಬಂದ ಕಾರಣ ಹಲವಾರು ವಿದ್ಯಾರ್ಥಿಗಳು ಪರೀಕ್ಷೆಗೆ ಸರಿಯಾದ ಸಮಯಕ್ಕೆ ಬರಲು ಆಗಿರಲಿಲ್ಲ. ಕರ್ನಾಟಕ ಸರ್ಕಾರದ ಮನವಿಯಂತೆ ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು.
ಮರು ಪರೀಕ್ಷೆ ಬರೆಯಲು ಬಯಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಮೇ 5ರ ರೈಲ್ವೆ ಟಿಕೆಟ್, ಪ್ರವೇಶ ಪತ್ರವನ್ನು ಜೊತೆಗೆ ಲಗತ್ತಿಸಬೇಕು. ಸುಮಾರು 30 ವಿದ್ಯಾರ್ಥಿಗಳು ಯಾವುದೇ ಕಾರಣ ನೀಡದೆ ಮರು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಾರೆ.
ಸರಿಯಾದ ಕಾರಣ ನೀಡದೆ, ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಕೇವಲ ಸೈಬರ್ ಸೆಂಟರ್ನಿಂದ ಮರು ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಅರ್ಜಿಗಳನ್ನು ವಜಾಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.